ಮತ್ತೆ ಹೈಕಮಾಂಡ್ ಅಂಗಳದಲ್ಲಿ ಖಾತೆ ಹಂಚಿಕೆ ಚೆಂಡು ! ಅಸಮಧಾನ ಹೊತ್ತು ದೆಹಲಿಯತ್ತ ಮುಖಮಾಡಿದ ಸಚಿವ ಶ್ರೀರಾಮುಲು…!!

0

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಜನರ ನೆಮ್ಮದಿಗೆಡಿಸಿದ್ದರೇ, ರಾಜ್ಯ ಸರ್ಕಾರ ಮಾತ್ರ ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆಯ ಸರ್ಕಸ್ ನಲ್ಲಿ ಬ್ಯಸಿಯಾಗಿದೆ. ಈ ಮಧ್ಯೆ ಆರೋಗ್ಯ ಖಾತೆಯನ್ನು ತಮ್ಮಿಂದ ಕಿತ್ತುಕೊಂಡ ಸಿಎಂ ಕ್ರಮಕ್ಕೆ ಸಚಿವ ಶ್ರೀರಾಮುಲು ಆಕ್ರೋಶಗೊಂಡಿದ್ದು, ಅಸಮಧಾನ ಹೊತ್ತು ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ.

ಕೊರೋನಾ ನಿಯಂತ್ರಣದಲ್ಲಿ ಎಡವಿದ ರಾಜ್ಯ ಸರ್ಕಾರ ತಿಪ್ಪೆ ಸಾರಿಸಲು ಆರೋಗ್ಯ ಸಚಿವರನ್ನೆ ಬದಲಾಯಿಸಿ ಜನರಿಗೆ ಸಮಾಧಾನ ಪಡಿಸುವ ಪ್ರಯತ್ನ ಮಾಡಿದೆ. ಆದರೆ ಕೊರೋನಾ ಉಲ್ಬಣಗೊಂಡಿರುವ ಹೊತ್ತಿನಲ್ಲಿ ತಮ್ಮಿಂದ ಆರೋಗ್ಯ ಖಾತೆ ಕಿತ್ತುಕೊಂಡ ಸಿಎಂ ಕ್ರಮಕ್ಕೆ ಫುಲ್ ರಾಂಗ್ ಆಗಿರುವ ಸಚಿವ ಶ್ರೀರಾಮುಲು ಈ ಪ್ರಯತ್ನದಿಂದ ನನ್ನ ಯೋಗ್ಯತೆ ಮೇಲೆ ಅನುಮಾನ ಮೂಡಿ ನಾನು ಅಸಮರ್ಥ ಅನ್ನೋ ಭಾವನೆ ಬರಲಿದೆ ಎಂದು ಕಿಡಿಕಾರಿದ್ದಾರೆ.

ಶ್ರೀರಾಮುಲು ಹೇಳುವುದರಲ್ಲಿಯೂ ನ್ಯಾಯವಿದೆ. ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಇದೇ ಕಾರಣಕ್ಕೆ ಆರೋಗ್ಯ ಸಚಿವರನ್ನೇ ಬದಲಾಯಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಇದೇ ಕಾರಣದಿಂದಲೇ ಶ್ರೀರಾಮುಲು ರಾಜ್ಯದ ಜನತೆಗೆ ಕೆಟ್ಟ ಸಂದೇಶ ಹೋಗುವುದು ಬೇಡಾ ಅಂತಿದ್ದಾರೆ.

ಅಷ್ಟೇ ಅಲ್ಲ ಖಾತೆ ಬದಲಾವಣೆ ವಿಚಾರ ತಿಳಿಯುತ್ತಿದ್ದಂತೆ ಬಳ್ಳಾರಿಯಿಂದ ಬೆಂಗಳೂರಿಗೆ ಧಾವಿಸಿ ಬಂದ ಶ್ರೀರಾಮುಲು ಸಿಎಂ ಜೊತೆ ವಾಗ್ವಾದ ನಡೆಸಿ ಒಂದು ಹಂತಕ್ಕೆ ರಾಜೀನಾಮೆ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ಶ್ರೀರಾಮುಲು ಅವರನ್ನು ಸಮಾಧಾನಪಡಿಸಿದ್ದು, ನಿಮ್ಮಿಷ್ಟದಂತೆ ಸಮಾಜ ಕಲ್ಯಾಣ ಇಲಾಖೆ ನೀಡಲಾಗಿದೆ. ಸಚಿವರಾಗಿ ಮುಂದುವರೆಯಿಸಿ ಎಂದು ಮನವೊಲಿಸಿ ದ್ದಾರೆ ಎನ್ನಲಾಗಿದೆ.

ಆದರೆ ಈ ಸಮಾಧಾನ ಶ್ರೀರಾಮುಲು ಆಕ್ರೋಶ ತಣಿಸುವಲ್ಲಿ ವಿಫಲವಾಗಿದ್ದು,  ಹೀಗಾಗಿ ತಮಗಾದ ಅನ್ಯಾಯ ಹಾಗೂ ಅವಮಾನದ ನೋವು ಹೊತ್ತು ದೆಹಲಿಗೆ ತೆರಳಲು ಸಿದ್ಧವಾಗಿದ್ದಾರೆ. ಹೈಕಮಾಂಡ್ ಮುಂದೇ ತಮಗಾದ ಅನ್ಯಾಯಕ್ಕೆ ನ್ಯಾಯ ಕೇಳಲಿದ್ದಾರೆ. ಚುನಾವಣೆ ವೇಳೆ ಸೂಕ್ತವಾಗಿ ಪಕ್ಷ ಸಂಘಟಿಸಿ ಗೆದ್ದು ಬಂದರೇ ಡಿಸಿಎಂ ಪಟ್ಟದ ಭರವಸೆ ನೀಡಲಾಗಿತ್ತು. ಆದರೆ ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ಕೇವಲ ಸಚಿವ ಸ್ಥಾನ ನೀಡಲಾಗಿದೆ. ಅದರಲ್ಲೂ ಆರೋಗ್ಯ ಖಾತೆ ಕೊಟ್ಟು ಕಿತ್ತುಕೊಂಡಿರೋದರಿಂದ ರಾಜ್ಯದಲ್ಲಿ ನನ್ನ ವರ್ಚಸ್ಸಿಗೆ ಧಕ್ಕೆ ಯಾಗಲಿದೆ. ಹೀಗಾಗಿ ಆರೋಗ್ಯ ಖಾತೆ ಹಾಗೂ ಡಿಸಿಎಂ ಪಟ್ಟ ಎರಡು ಬೇಕೆಂದು ಶ್ರೀರಾಮುಲು ಹೈಕಮಾಂಡ್ ಮುಂದೇ ಪಟ್ಟುಹಿಡಿಯುವ ಸಾಧ್ಯತೆ ಇದೆ.

ಆದರೆ ಹೈಕಮಾಂಡ್ ಈ ಕೊರೋನಾ ಸಂಘರ್ಷದ ಹೊತ್ತಿನಲ್ಲಿ ಶ್ರೀರಾಮುಲು ಈ ಅಸಮಧಾನ ಹಾಗೂ ಖಾತೆ ಬದಲಾವಣೆಯ ಪಟ್ಟನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇಲ್ಲ. ಅದರ ಬದಲಾಗಿ ಕೊರೋನಾ ಕಾಲಘಟ್ಟದಲ್ಲೂ ರಾಜಕೀಯ ಮೇಲಾಟಗಳನ್ನು ಮಾಡೋದು ಜನರ ದೃಷ್ಟಿಯಲ್ಲಿ ಪಕ್ಷದ ಗೌರವಕ್ಕೆ ಧಕ್ಕೆ ತರುತ್ತೆ. ಹೀಗಾಗಿ ಸಿಕ್ಕಿರುವ ಖಾತೆಯನ್ನೇ ನಿಭಾಯಿಸಿಕೊಂಡು ಹೋಗಿ ಪಕ್ಷ ಸಂಘಟಿಸಿ ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಯನ್ನು ಗಮನಿಸುತ್ತೇವೆ ಎಂಬ ಭರವಸೆ ನೀಡೋ ಸಾಧ್ಯತೆ ಇದೆ.

ಯಾಕೆಂದರೇ ಒಂದೊಮ್ಮೆ ಶ್ರೀರಾಮುಲು ಅವರ ಬಂಡಾಯಕ್ಕೆ ಹೆದರಿ ಅವರ ಬೇಡಿಕೆ ಈಡೇರಿಸಿದ್ರೇ ಶ್ರೀರಾಮುಲು ದೆಹಲಿ ಪ್ಲೈಟ್ ಇಳಿದು ಬೆಂಗಳೂರು ತಲುಪುವ ವೇಳೆ ಮತ್ತಿಷ್ಟು ಆಕಾಂಕ್ಷಿತರು ತಮ್ಮ ಬೇಡಿಕೆ ಜೊತೆ ಹೈಕಮಾಂಡ್ ಅಂಗಳಕ್ಕೆ ಲಗ್ಗೆ ಇಡೋದು ಪಕ್ಕಾ. ಹೀಗಾಗಿ ಶ್ರೀರಾಮುಲು ಅವರಿಗೆ ಹೈಕಮಾಂಡ್ ಅಂಗಳದಲ್ಲೂ ಸಮಧಾನ ಬಿಟ್ಟರೇ ಬೇರೆನೂ ಸಿಗೋದು ಅನುಮಾನ ಎನ್ನಲಾಗ್ತಿದೆ.

ಇನ್ನೊಂದೆಡೆ ಶ್ರೀರಾಮುಲು ಬಂಡಾಯ ಕೂಡ ಈಗ ಮೊದಲಿನಷ್ಟು ಸರ್ಕಾರವನ್ನು ಭಯ ಬೀಳಿಸುವ ಸಾಧ್ಯತೆಗಳು ಕಡಿಮೆ. ಯಾಕೆಂದರೆ ಬದಲಾದ ರಾಜಕೀಯ ಸ್ಥಿತಿಗತಿಗಳಲ್ಲಿ ರಾಜ್ಯದಲ್ಲಿ ಅಧಿಕಾರ,ಸ್ಥಾನಮಾನ, ಹುದ್ದೆ ಎಲ್ಲವೂ ಕೇವಲ ಹೈಕಮಾಂಡ್ ವಿವೇಚನೆಯ ಬಲದಿಂದಲೇ ಸಿಗಲಾರಂಭಿಸಿದೆ.

ಹೀಗಾಗಿ ರಾಜ್ಯದಲ್ಲಿ ಈ ಮೊದಲು ಬಿಜೆಪಿ ನಾಯಕರು ನಡೆಸಿದಂತಹ ರೆಸಾರ್ಟ್ ರಾಜಕಾರಣದಂತಹ ರಾಜಕೀಯ ಪ್ರಹಸನಗಳು, ಸರ್ಕಾರ ಬೀಳಿಸುವ ಪ್ರಯತ್ನಗಳು ನಡೆಯೋದು ಅನುಮಾನ. ಅಲ್ಲದೇ ಜಾತಿ ಲೆಕ್ಕಾಚಾರದಲ್ಲೂ ಶ್ರೀರಾಮುಲು ಅಸಮಧಾನಕ್ಕೆ ಬೆಲೆ ಸಿಗೋದು ಅಷ್ಟಕಷ್ಟೇ. ಈ ಎಲ್ಲ ಕಾರಣಕ್ಕೆ ದೆಹಲಿಯಿಂದ ಶ್ರೀರಾಮುಲು ಹೊಸ ಹುದ್ದೆ ಬದಲು ಒಂದಿಷ್ಟು ಬುದ್ಧಿಮಾತು ಹೊತ್ತು ತರೋ ಲಕ್ಷಣವೇ ದಟ್ಟವಾಗಿದೆ ಅಂತಿದೆ ರಾಜಕೀಯ ವಲಯ

Leave A Reply

Your email address will not be published.