ಬಹುಭಾಷೆಗಳಲ್ಲಿ ತೆರೆಗೆ ಬರಲಿರೋ ಕೆಜಿಎಫ್-2 ಡಬ್ಬಿಂಗ್ ಕಾರ್ಯ ಮುಗಿದಿದೆ. ತಮ್ಮ ಸೂಪರ್ ಸ್ಪೆಶಲ್ ಸಿನಿಮಾ ಕೆಲಸ ಮುಗಿಸಿರೋ ರಾಕಿಂಗ್ ಸ್ಟಾರ್ ತಮ್ಮ ಕನಸಿನ ಕೆಲಸಕ್ಕೆ ಕೈಹಾಕಿದ್ದು, ಫುಲ್ ಟೈಂ ಕೃಷಿಕರಾಗೋ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಹಲವು ಇಂಟರವ್ಯೂಗಳಲ್ಲಿ ಮಾದರಿ ಕೃಷಿ ಮಾಡಬೇಕು. ಕೃಷಿಕನಾಗಬೇಕು ಎಂಬ ಮಾತನ್ನು ಹೇಳಿದ್ದರು. ಈಗ ಸ್ವತಃ ಕೃಷಿಕನಾಗಲು ಸಿದ್ಧವಾಗಿರೋ ಯಶ್ ಹಾಸನದ ತಿಮ್ಲಾಪುರದ ಜಮೀನು ಸ್ವಚ್ಛಗೊಳಿಸೋ ಕೆಲಸದಲ್ಲಿ ನಿರತರಾಗಿದ್ದಾರೆ.

ಯಶ್ ಮುಂದೇ ನಿಂತು ಜೆಸಿಬಿ ಬಳಸಿ ತಿಮ್ಲಾಪುರದ ಜಮೀನನನ್ನು ಸ್ವಚ್ಛಗೊಳಿಸುತ್ತಿರುವ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಜಮೀನಿನಲ್ಲಿ ಮಳೆಕೊಯ್ಲು, ನೀರಿಂಗಿಸುವ ಯೋಜನೆ ಸೇರಿದಂತೆ ಸಾವಯವ ಕೃಷಿಗೆ ಪೂರಕವಾದ ಸಿದ್ಧತೆಗಳನ್ನು ಮಾಡಿಸುತ್ತಿದ್ದಾರಂತೆ ಯಶ್.

ಕೊಳವೆಬಾವಿ ರಹಿತ ತೋಟಗಾರಿಕೆ ಮಾಡೋ ಕನಸಿನಲ್ಲಿರೋ ಯಶ್ ಅದಕ್ಕಾಗಿ ಭೂಮಿ ಬಿದ್ದ ಎಲ್ಲ ನೀರನ್ನು ಉಳಿಸುವ ಪ್ರಯತ್ನದಲ್ಲಿದ್ದಾರಂತೆ. ಇದರಿಂದ ಎಲ್ಲ ರೈತರಿಗೂ ನೆರವಾಗಲಿದೆ ಅನ್ನೋದು ಯಶ್ ಮಾತು.

ಕೆಲದಿನಗಳ ಹಿಂದೆಯಷ್ಟೇ ಯಶ್ ಗೆ ಸೇರಿದ ತಿಮ್ಲಾಪುರ ಜಮೀನಿನ ರಸ್ತೆ ಮಾಡಿಸುವ ವಿಚಾರಕ್ಕೆ ಸ್ಥಳೀಯರು ಹಾಗೂ ಯಶ್ ಪೋಷಕರ ನಡುವೆ ಗಲಾಟೆಯಾಗಿತ್ತು. ಬಳಿಕ ಪೊಲೀಸರ ಮಧ್ಯಸ್ತಿಕೆಯಲ್ಲಿ ಮಾತುಕತೆ ನಡೆಸಿ ಪ್ರಕರಣ ಸುಖಾಂತ್ಯಕಂಡಿತ್ತು.

ಇದೀಗ ಅದೇ ಜಮೀನಿನಲ್ಲಿ ಯಶ್ ಟೊಪ್ಪಿ ಧರಿಸಿ ತಾವು ಕೆಲಸದವರ ಜೊತೆಯೇ ನಿಂತು ಕೆಲಸ ಮಾಡಿಸುತ್ತಿರುವ ಪೋಟೋಸ್ ಹಂಚಿಕೊಂಡಿದ್ದಾರೆ.

ಕೆರೆಗಳಿಗೆ ನೀರುತುಂಬಿಸುವುದು, ಮಳೆನೀರಿನ ಪುನರ್ ಬಳಕೆ ಸೇರಿದಂತೆ ಹಲವು ಪ್ರಕೃತಿಪೂರಕ ಕೆಲಸಗಳಲ್ಲಿ ಆಸಕ್ತಿ ಹೊಂದಿರುವ ಯಶ್ ಯಶೋಮಾರ್ಗ್ ಟ್ರಸ್ಟ್ ಮೂಲಕ ರೈತರಿಗೆ ನೆರವಾಗುವ ಕೆಲಸ ಮಾಡಿದ್ದಾರೆ. ಈಗ ಸ್ವತಃ ತಾವೇ ಮಣ್ಣಿನ ಮಗನಾಗಲು ಸಿದ್ಧವಾಗಿದ್ದು, ಅಭಿಮಾನಿಗಳಿಗೆ ಫುಲ್ ಖುಷಿಯಾಗಿದೆ.