ಸರ್ಜಾ ಕುಟುಂಬದ ಕನಸೊಂದು ನನಸಾಗಿದೆ. ನಟ ಅರ್ಜುನ್ ಸರ್ಜಾ ಭಕ್ತಿಯಿಂದ ಹನುಮಂತನ ದೇಗುಲ ನಿರ್ಮಿಸಿದ್ದು, ಇತ್ತೀಚಿಗಷ್ಟೇ ಸರಳ ಸಮಾರಂಭದಲ್ಲಿ ಅರ್ಜುನ್ ಸರ್ಜಾ ದೇಗುಲವನ್ನು ಲೋಕಾರ್ಪಣೆ ಮಾಡಿದ್ದು, ಜ್ಯೂನಿಯರ್ ಚಿರು ಕೂಡ ಈ ದೇಗುಲದ ದರ್ಶನ ಮಾಡಿದ್ದಾರೆ.

ತಮ್ಮ ಹಲವು ವರ್ಷಗಳ ಕನಸಿನಂತೆ ಅರ್ಜುನ್ ಸರ್ಜಾ, ಚೈನೈನ ಗುರುಗಂಬಕ್ಕಮನಲ್ಲಿ ಪದ್ಮಾಸನದಲ್ಲಿ ಕುಳಿತ ಹನುಮಂತನ ದೇವಾಲಯ ನಿರ್ಮಿಸಿದ್ದಾರೆ. ಜುಲೈ 1 ರಂದು ಕುಂಭಾಭೀಷೇಕ ಸೇರಿದಂತೆ ಹಲವು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ದೇವಾಲಯ ಲೋಕಾರ್ಪಣೆಗೊಂಡಿದೆ.

ಕೇವಲ ಕುಟುಂಬ ವರ್ಗದವರ ಸಮ್ಮುಖದಲ್ಲಿ ಸರಳವಾಗಿ ನಡೆದ ಈ ಸಮಾರಂಭದಲ್ಲಿ ಬೆಂಗಳೂರಿನಿಂದ ನಟ ಧ್ರುವ್ ಸರ್ಜಾ ಹಾಗೂ ಕುಟುಂಬ ಪಾಲ್ಗೊಂಡಿತ್ತು. ಆದರೆ ಕೊರೋನಾ ಕಾರಣಕ್ಕೆ ನಟಿ ಮೇಘನಾ ರಾಜ್ ಹಾಗೂ ಕುಟುಂಬದವರು ಪಾಲ್ಗೊಂಡಿರಲಿಲ್ಲ.

ಆದರೆ ಜ್ಯೂನಿಯರ್ ಚಿರು ದೇವಾಲಯ ತೋರಿಸಲೇ ಬೇಕೆಂಬ ಕಾರಣಕ್ಕೆ ಅರ್ಜುನ್ ಸರ್ಜಾ ವಿಡಿಯೋ ಕಾಲ್ ಮಾಡಿದ್ದು, ವಿಡಿಯೋ ಕಾಲ್ ಮೂಲಕ ದೇವಾಲಯವನ್ನು ಜ್ಯೂನಿಯರ್ ಚಿರುಗೆ ತೋರಿಸಿದ್ದಾರೆ. 8 ತಿಂಗಳ ಮಗು ಜ್ಯೂನಿಯರ್ ಚಿರು ಕೂಡ ಅಷ್ಟೇ ಆಸಕ್ತಿಯಿಂದ ದೇಗುಲವನ್ನು ನೋಡಿ ಖುಷಿ ಪಟ್ಟಿದ್ದಾನಂತೆ.

ಈ ವಿಡಿಯೋ ಕಾಲ್ ಸ್ಕ್ರೀನ್ ಶಾಟ್ ಹಂಚಿಕೊಂಡಿರೋ ಮೇಘನಾ ರಾಜ್ ಪೋಸ್ಟ್ ನಲ್ಲಿ ಇಲ್ಲಿಂದಲೇ ಜ್ಯೂನಿಯರ್ ಚಿರು ಕೂಡ ಹನುಮಂತ ದೇವರ ದರ್ಶನ ಪಡೆದುಕೊಂಡಿದ್ದಾನೆ ಎಂಬ ಖುಷಿಯನ್ನು ಹಂಚಿಕೊಂಡಿದ್ದಾರೆ.ಅರ್ಜುನ್ ಸರ್ಜಾ ಕೂಡ ಇ ವರ್ಚುವಲ್ ಟೂರ್ ಪೋಟೋ ಶೇರ್ ಮಾಡಿದ್ದಾರೆ.

ಅರ್ಜುನ್ ಸರ್ಜಾ, ಧ್ರುವ್ ಸರ್ಜಾ, ಚಿರಂಜೀವಿ ಸರ್ಜಾ ಸೇರಿದಂತೆ ಸರ್ಜಾ ಕುಟುಂಬವೇ ಆಂಜನೇಯ ಭಕ್ತರಾಗಿದ್ದು, ಅರ್ಜುನ್ ಸರ್ಜಾ ದೇವಾಲಯ ನಿರ್ಮಿಸಿ ಕನಸನ್ನು ಈಡೇರಿಸಿಕೊಂಡಿದ್ದು, ಜ್ಯೂನಿಯರ್ ಚಿರು ಕೂಡ ದೇವರ ದರ್ಶನ ಪಡೆದು ಖುಷಿಯಾಗಿದ್ದಾರೆ.