ಜ್ಯೂನಿಯರ್ ಚಿರು ಅಜ್ಜಿ-ತಾತ ತಾಯಿ ಹಾಗೂ ಅಪ್ಪನ ಮನೆಯವರ ಪ್ರೀತಿಯ ಆರೈಕೆಯಲ್ಲಿ ಬೆಳೆಯುತ್ತಿದ್ದು, ಹುಟ್ಟುತ್ತಲೇ ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ನ ಅಭಿಮಾನಿಗಳ ಅಚ್ಚುಮೆಚ್ಚಿನ ಕಂದ ಎನ್ನಿಸಿದ್ದಾನೆ. ನಾಮಕರಣಕ್ಕೂ ಮುನ್ನವೇ ಜ್ಯೂನಿಯರ್ ಚಿರುಗೆ ಗಿಫ್ಟ್ ಗಳ ಸುರಿಮಳೆಯಾಗಿದ್ದು, ಬೆಳ್ಳಿಯ ತೊಟ್ಟಿಲ ಬಳಿಕ ಈಗ ಚಿಕ್ಕಪ್ಪ ಧ್ರುವ್ ಸರ್ಜಾ ಚಿನ್ನದ ಉಡುಗೊರೆ ನೀಡಿದ್ದಾರೆ.

ಸ್ಯಾಂಡಲ್ ವುಡ್ ನೆಚ್ಚಿನ ಜೋಡಿ ಮೇಘನಾರಾಜ್ ಹಾಗೂ ಚಿರಂಜೀವಿ ಸರ್ಜಾ ಅನುರೂಪ ದಾಂಪತ್ಯದ ಫಲವಾಗಿ ಭೂಮಿಗೆ ಬಂದ ಜ್ಯೂನಿಯರ್ ಚಿರು ಸರ್ಜಾ ಹಾಗೂ ಸುಂದರ ರಾಜ್ ಕುಟುಂಬದ ಕಣ್ಮಣಿ. ಅಜ್ಜನ ಮನೆ ಹಾಗೂ ಮನೆಯವರ ಪ್ರೀತಿಯಲ್ಲಿ ಮಿಂದೇಳುತ್ತಿರುವ ಜ್ಯೂನಿಯರ್ ಚಿರುಗೆ ಈಗಷ್ಟೇ ಮೂರು ತಿಂಗಳು ತುಂಬುತ್ತಿದೆ.

ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಜ್ಯೂನಿಯರ್ ಚಿರು ನಾಮಕರಣಕ್ಕೆ ಸಿದ್ಧತೆ ನಡೆದಿದ್ದು, ನಾಮಕರಣದ ದಿನಾಂಕ ಇನ್ನಷ್ಟೇ ಫೈನಲ್ ಆಗಬೇಕಿದೆ. ಈ ಮಧ್ಯೆ ತವರಿನಿಂದ ನಡೆಯುವ ತೊಟ್ಟಿಲ ಶಾಸ್ತ್ರ ಮುಗಿಸಿರುವ ಅಜ್ಜ ಸುಂದರ್ ರಾಜ್ ಹಾಗೂ ಅಜ್ಜಿ ಪ್ರಮೀಳಾ ಜೋಷಾಯ್ ಮೊಮ್ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಮೇಘನಾ ಹಾಗೂ ಚಿರು ಹೆಸರನ್ನು ಸೇರಿಸಿ ಜ್ಯೂನಿಯರ್ ಚಿರುಗೆ ಚಿಂತನ್ ಅಥವಾ ಚಿರಂತನ್ ಎಂದು ಹೆಸರಿಡಲಾಗುತ್ತದೆ ಎನ್ನಲಾಗಿದೆ. ಈ ಮಧ್ಯೆ ಅಣ್ಣ ಮಗುವಿಗಾಗಿ ಪ್ರತಿಕ್ಷಣವೂ ಮಿಡಿಯುವ ಹೀರೋ ಧ್ರುವ್ ಸರ್ಜಾ ಮಗು ಹುಟ್ಟುವ ಮೊದಲೇ ಬೆಳ್ಳಿಯ ತೊಟ್ಟಿಲು ತಂದು ತಮ್ಮ ಪ್ರೀತಿ-ಕಾಳಜಿ ಮೆರೆದಿದ್ದರು.

ಈಗ ಸಿನಿಮಾ ಕೆಲಸದ ಸಂಬಂಧ ಇತ್ತೀಚಿಗೆ ಹೈದ್ರಾಬಾದ್ ಗೆ ತೆರಳಿದ್ದ ಧ್ರುವ್ ಸರ್ಜಾ ಅಲ್ಲಿಂದಲೂ ತಮ್ಮ ಅಣ್ಣನ ಮಗುವಿಗಾಗಿ ಪ್ರಸಿದ್ಧವಾದ ಹೈದ್ರಾಬಾದ್ ಮುತ್ತಿನ ಉಂಗುರಹಾಗೂ ಚಿನ್ನದ ಸರ ತಂದಿದ್ದಾರೆ ಎನ್ನಲಾಗಿದೆ.

ಅಂದಾಜು 20 ಲಕ್ಷ ರೂಪಾಯಿ ಬೆಲೆಬಾಳುವ ಉಂಗುರ ಹಾಗೂ ಸರವನ್ನು ಜ್ಯೂನಿಯರ್ ಚಿರುಗೆ ನಾಮಕರಣದ ಗಿಫ್ಟ್ ಆಗಿ ನೀಡಲು ಧ್ರುವ್ ಸರ್ಜಾ ಹಾಗೂಪ್ರೇರಣಾ ನಿರ್ಧರಿಸಿದ್ದಾರಂತೆ. ಚಿರು ನಿಧನದ ಬಳಿಕ ಸ್ವಂತ ಅಕ್ಕ-ತಂಗಿಯನ್ನು ನೋಡಿಕೊಂಡಷ್ಟೇ ಅಕ್ಕರೆಯಿಂದ ಮೇಘನಾರನ್ನು ಕಾಳಜಿ ಮಾಡುತ್ತಿರುವ ಧ್ರುವ್ ಸರ್ಜಾ , ಮಗು ಹುಟ್ಟಿದಾಗ ಅಣ್ಣನೇ ಮರಳಿ ಬಂದ ಎಂದು ಸಂಭ್ರಮಿಸಿದ್ದರು. ಈಗ ನಾಮಕರಣದ ವೇಳೆಗೆ ದುಬಾರಿ ಗಿಫ್ಟ್ ತಂದು ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ