ಬರೋಬ್ಬರಿ ಎರಡು ವರ್ಷಗಳ ಬಳಿಕ ಚಿತ್ರಮಂದಿರಕ್ಕೆ ಬಂದ ಯಜಮಾನ ಅಭಿಮಾನಿಗಳ ಮನಗೆದ್ದು ವಿಜಯಯಾತ್ರೆ ಮುಂದುವರೆಸಿದ್ದು, ರಿಲೀಸ್ ಆದ 20 ದಿನದಲ್ಲಿ 100 ಕೋಟಿ ಹಣಗಳಿಸುವ ಮೂಲಕ ರಾಬರ್ಟ್ ಸ್ಯಾಂಡಲ್ ವುಡ್ ಸಿನಿಮಾರಂಗದಲ್ಲಿ ಹೊಸ ಸಾಧನೆ ಬರೆದಿದೆ.

ಮಾರ್ಚ್ 11 ರ ಶಿವರಾತ್ರಿಯಂದು ರಾಜ್ಯದ 2000 ಅಧಿಕ ಸ್ಕ್ರೀನ್ ನಲ್ಲಿ ಏಕಕಾಲಕ್ಕೆ ತೆರೆಕಂಡ ರಾಬರ್ಟ್ ಸಿನಿಮಾ ಮೊದಲ ದಿನವೇ ಕೋಟ್ಯಾಂತರ ರೂಪಾಯಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಭರವಸೆ ಮೂಡಿಸಿತ್ತು. ಇದೀಗ ರಿಲೀಸ್ ಆದ 20 ದಿನದಲ್ಲಿ ಬರೋಬ್ಬರಿ 100 ಕೋಟಿ ಗಳಿಸುವ ಮೂಲಕ ದರ್ಶನ್ ಬಾಕ್ಸ್ ಆಫೀಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ರಾಬರ್ಟ್ ರಿಲೀಸ್ ಆದ ಮೊದಲ ದಿನ 17.24 ಕೋಟಿ ಗಳಿಸಿತ್ತು. ಎರಡನೇ ದಿನ 12.78 ಕೋಟಿ,ಮೂರನೇ ದಿನ 14.10 ಕೋಟಿ ಹಾಗೂ ನಾಲ್ಕನೇ ದಿನ ಬರೋಬ್ಬರಿ 15.68 ಕೋಟಿ ಹಣ ಸಂಗ್ರಹಿಸಿತ್ತು. ಹೀಗಾಗಿ ರಾಬರ್ಟ್ 100 ಕೋಟಿ ಕ್ಲಬ್ ಸೇರೋದು ಖಚಿತ ಎಂದು ಆಗಲೇ ಸಿನಿತಜ್ಞರು ಭವಿಷ್ಯ ನುಡಿದಿದ್ದರು.

ಇದೀಗ ಮಾರ್ಚ್ 31 ರ ವೇಳೆಗೂ ರಾಬರ್ಟ್ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿದ್ದು, ಥಿಯೇಟರ್ ಗಳಲ್ಲಿ ಆರಂಭಕ್ಕೆ ಹೋಲಿಸಿದರೇ ಈಗ ಕೊಂಚ ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಹೊರತುಪಡಿಸಿದರೇ ಇನ್ಯಾವ ಸಿನಿಮಾಗಳು 100 ಕೋಟಿ ಕ್ಲಬ್ ಸೇರಿರಲಿಲ್ಲ. ಇದೀಗ 20 ದಿನದಲ್ಲಿ ಈ ಸಾಧನೆ ಮಾಡುವ ರಾಬರ್ಟ್ ಹೊಸ ದಾಖಲೆ ತನ್ನದಾಗಿಸಿಕೊಂಡಿದೆ.


ತರುಣ ಸುಧೀರ್ ನಿರ್ದೇಶನದ ರಾಬರ್ಟ್ ತಮಿಳು,ತೆಲುಗಿನಲ್ಲೂ ಏಕಕಾಲಕ್ಕೆ ರಿಲೀಸ್ ಆಗಿದ್ದು, ಉಮಾಪತಿ ಚಿತ್ರ ನಿರ್ಮಿಸಿದ್ದರು. ಮಿಸ್ ಸುಪ್ರಾ ಇಂಟರ್ ನ್ಯಾಶನಲ್ ಖ್ಯಾತಿಯ ಆಶಾಭಟ್ ನಾಯಕಿಯಾಗಿದ್ದ ಸಿನಿಮಾದ ಕಣ್ಣು ಹೊಡೆಯಾಕ್ ಹಾಡು ಸಖತ್ ಫೇಮಸ್ ಆಗಿತ್ತು.
ದರ್ಶನ್ ಹಾಗೂ ಚಿತ್ರತಂಡ ರಾಬರ್ಟ್ ಯಶಸ್ಸಿಗೆ ಕಾರಣವಾದ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ವಿಜಯಯಾತ್ರೆ ಮೂಲಕ ಹಲವು ಜಿಲ್ಲೆಗಳಿಗೆ ತೆರಳಲು ಸಿದ್ಧವಾಗಿತ್ತು. ಆದರೆ ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ವಿಜಯಯಾತ್ರೆ ರದ್ದಾಗಿದ್ದು, ಇಲ್ಲಿಂದಲೇ ಧನ್ಯವಾದ ಹೇಳೋದಾಗಿ ದರ್ಶನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.