ಸಿಡಿ ಪ್ರಕರಣದಲ್ಲಿ ತನಿಖಾಧಿಕಾರಿಗಳ ವಿರುದ್ಧವೇ ದೂರು…! ನ್ಯಾಯಾಲಯದ ಮೊರೆ ಹೋದ ಸಂತ್ರಸ್ಥೆ ಪರ ವಕೀಲ…!!


 ರಾಜ್ಯದಲ್ಲಿ ಪ್ರಹಸನದಂತೆ ಸಾಗುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖಾಧಿಕಾರಿಗಳ ವಿರುದ್ಧವೇ ಸಂತ್ರಸ್ಥೆ ಪರ ವಕೀಲರು ತಿರುಗಿ ಬಿದ್ದಿದ್ದಾರೆ. ಸಂತ್ರಸ್ಥೆ ಗೌಪ್ಯತೆ ಕಾಪಾಡುವಲ್ಲಿ ಇಬ್ಬರೂ ತನಿಖಾಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ವಕೀಲ ಜಗದೀಶ್ ಆರೋಪಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ಥೆಯ ವಿಡಿಯೋವನ್ನು ಮಾಧ್ಯಮಗಳಿಗೆ ನೀಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ಥೆ ಪರ ವಕೀಲರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಎಸಿಪಿ ಧರ್ಮೆಂದ್ರ ಹಾಗೂ ಎಂಸಿ ಕವಿತಾ ವಿರುದ್ಧ ಜಗದೀಶ್ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲ ಲಿಖಿತ ದೂರಿನ ಸ್ವೀಕೃತಿ ಪತ್ರವನ್ನು ನಗರ ಪೊಲೀಸ್ ಆಯುಕ್ತರಿಗೆ ಕಳುಹಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಲೈವ್ ನಡೆಸಿ ಮಾತನಾಡಿದ ಸಂತ್ರಸ್ಥೆ ಪರ ವಕೀಲ ಜಗದೀಶ್, ಸಂತ್ರಸ್ಥೆಯ ಪೋಟೋತೆಗೆಯುವುದು, ವಿಡಿಯೋ ಮಾಡುವುದು ಅಥವಾ ಆಕೆಯ ಗುರುತನ್ನು ಬಿಟ್ಟುಕೊಡುವುದು ಎಲ್ಲದೂ ಅಪರಾಧ. ಹೀಗಿದ್ದೂ ಇಬ್ಬರೂ ಅಧಿಕಾರಿಗಳು ಸಂತ್ರಸ್ಥೆಯ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡಿದ್ದಾರೆ ಎಂದು ಜಗದೀಶ್ ಆರೋಪಿಸಿದ್ದಾರೆ.

ನಿರ್ಭಯಾ ಪ್ರಕರಣದ ಬಳಿಕ ಸಾಕಷ್ಟು ಕಠಿಣ ನಿಯಮ ರೂಪಿಸಲಾಗಿದೆ. ಸಂತ್ರಸ್ಥೆಯ ಮುಖವಾಗಲಿ ಅಥವಾ ಗುರುತನ್ನಾಗಲಿ ,ವೈಯಕ್ತಿಕ ಮಾಹಿತಿಯನ್ನಾಗಲಿ ಸೋರಿಕೆ ಮಾಡಬಾರದೆಂದು ಹೇಳಲಾಗಿದೆ. ಆದರೆ ಇಲ್ಲಿ ಎಸಿಪಿಗಳೇ ಸಿಬ್ಬಂದಿಗಳ ಮೂಲಕ ವಿಡಿಯೋ ಮಾಡಿಸಿದ್ದಾರೆ. ಆ ಮೂಲಕ ಆರೋಪಿಗೆ ನೆರವಾಗಿದ್ದಾರೆ ಎಂದು ವಕೀಲ್ ಜಗದೀಶ್ ಆರೋಪಿಸಿದ್ದಾರೆ.

ನಿನ್ನೆ ಸಂತ್ರಸ್ಥೆ ಎನ್ನಲಾದ ಯುವತಿ ಎಸ್ಐಟಿ ಹಾಗೂ ನ್ಯಾಯಾಧೀಶರ ಎದುರು ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಈ ವೇಳೆ ಸಂತ್ರಸ್ಥೆಯ ದೃಶ್ಯಾವಳಿಗಳು ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಇದಕ್ಕೆ ತನಿಖಾಧಿಕಾರಿಗಳೇ ಕಾರಣ ಎಂಬುದು ವಕೀಲರ ವಾದ.

Comments are closed.