Rashmika mandanna:ಟಾಲಿವುಡ್ ನಲ್ಲಿ ಮುಂದುವರೆದ ರಶ್ಮಿಕಾ ದಂಡಯಾತ್ರೆ….! ಮತ್ತೆ ನಿತಿನ್ ಗೆ ಜೊತೆಯಾದ ಕೊಡಗಿನ ಬೆಡಗಿ…!!

ಕನ್ನಡದ ಕಿರಿಕ್ ಪಾರ್ಟಿಯಿಂದ ಜರ್ನಿ ಆರಂಭಿಸಿ ಬಾಲಿವುಡ್ ಅಂಗಳವನ್ನು ತಲುಪಿದ ರಶ್ಮಿಕಾ ಟಾಲಿವುಡ್ ನಲ್ಲಿ ಗಟ್ಟಿಯಾಗಿ ನೆಲೆಯಾಗೋ ಲಕ್ಷಣ ದಟ್ಟವಾಗಿದೆ. ಭೀಷ್ಮ ಯಶಸ್ಸಿನ ಬೆನ್ನಲ್ಲೇ ರಶ್ಮಿಕಾ ಮತ್ತೊಂದು ತೆಲುಗು ಚಿತ್ರಕ್ಕೆ ನಿತಿನ್ ಜೊತೆಯಾಗಲು ಸಿದ್ಧವಾಗಿದ್ದಾರೆ.

ಸದ್ಯ ಹಿಂದಿಯ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹೈದ್ರಾಬಾದ್ ನಲ್ಲೇ ಕಾಲಕಳೆಯುತ್ತಿದ್ದಾರೆ. ಈ ಬಿಡುವಿನಲ್ಲೇ ಮತ್ತೊಂದು ತೆಲುಗು ಚಿತ್ರದ ಕತೆ ಕೇಳಿರೋ ರಶ್ಮಿಕಾ ಜೈ ಎಂದಿದ್ದು, ಭೀಷ್ಮ ಚಿತ್ರದ ನಾಯಕ ನಿತಿನ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ವಕ್ಕಂತಮ್ ವಂಶಿ ನಿರ್ದೇಶನದ ಹೊಸ ಚಿತ್ರಕ್ಕೆ ರಶ್ಮಿಕಾ ಸಹಿ ಹಾಕಿದ್ದು, ರೋಮ್ಯಾಟಿಂಕ್ ಕತೆಯನ್ನು  ಸಿನಿಮಾ ಹೊಂದಿದೆ. ಸದ್ಯ  ನಿತಿನ್ ಅಂಧಾಧುನ್ ರಿಮೇಕ್ ನಲ್ಲಿ ಬ್ಯುಸಿಯಾಗಿದ್ದು, ಇದರ ಬಳಿಕ ರಶ್ಮಿಕಾ ಹಾಗೂ ನಿತಿನ್ ಕಾಲ್ ಶೀಟ್ ಮೇಲೆ ಶೂಟಿಂಗ್ ಆರಂಭವಾಗಲಿದೆ.

ಈಗಾಗಲೇ ತೆಲುಗಿನಲ್ಲಿ ರಶ್ಮಿಕಾ ಅಲ್ಲೂ ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅಕ್ಟೋಬರ್ ವೇಳೆಗೆ ರಿಲೀಸ್ ಆಗೋ ಸಾಧ್ಯತೆ ಇದೆ.

ಇದಲ್ಲದೇ ಶರ್ವಾನಂದ್ ಅವರೊಂದಿಗೂ ಸಿನಿಮಾ ಒಪ್ಪಿಕೊಂಡಿರುವ ರಶ್ಮಿಕಾ ತೆಲುಗಿನ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚೋದು ಖಚಿತವಾಗಿದೆ.

ಕಳೆದ ವರ್ಷ ರಶ್ಮಿಕಾ ಹಾಗೂ ನಿತಿನ್ ಅಭಿನಯದ ಭೀಷ್ಮ ಸಿನಿಮಾ ರಿಲೀಸ್ ಆಗಿದ್ದು, ಬಾಕ್ಸಾಫೀಸ್ ನಲ್ಲಿ ಗೆದ್ದಿತ್ತು. ಅಲ್ಲದೇ ಜನರು ರಶ್ಮಿಕಾ ಹಾಗೂ ನಿತಿನ್ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಹೀಗಾಗಿ ರಶ್ಮಿಕಾ ಸದ್ಯ ಬಾಲಿವುಡ್ ಜೊತೆ ಟಾಲಿವುಡ್ ನಲ್ಲೂ ತಮ್ಮ ದಂಡಯಾತ್ರೆ ಯಶಸ್ವಿಯಾಗಿ ಮುಂದುವರೆಸುವ ಲಕ್ಷಣ ಗೋಚರಿಸುತ್ತಿದೆ.

Comments are closed.