ಸೌಭಾಗ್ಯದ ಮನೆಗೆ ಬೆಂಕಿ ಇಟ್ಟ ‘ಮಾತು’


‘ಮಾತು ಮನೆ ಕೆಡಿಸಿತು-ತೂತು ಒಲೆ ಕೆಡಿಸಿತು’ ಎನ್ನುತ್ತದೆ ಒಂದು ಗಾದೆ. ಇದನ್ನೇ ದಾಸರು, ‘ಆಚಾರ ವಿಲ್ಲದ ನಾಲಗೆ’ ಎಂದರು. ವಚನ ಸಾಹಿತ್ಯದ ಶರಣರು ‘ಮಾತೆಂಬುದು ಜ್ಯೋತಿರ್ಲಿಂಗ’ ಅಂತ ಸಾರಿದರು. ಮಾತಿನ ಬಗ್ಗೆ ಅದಕ್ಕಿರುವ ಬೆಲೆ, ನೆಲೆಯನ್ನು ಎಷ್ಟೋ ಉದಾಹರಣೆಗಳ ಮೂಲಕ ಹೀಗೆ ವ್ಯಾಖ್ಯಾನಿಸಬಹುದು. ಆದರೆ ರಾಜ್ಯ ರಾಜಕಾರಣದಲ್ಲಿ ಮಾತಿನಿಂದಲೇ ಮರ್ಮಘಾತಕ್ಕೆ ಕಾರಣರಾಗಿರುವುದು ವಿಶೇಷ. ಅಪರೂಪಕ್ಕೆ ಸಿಕ್ಕಿದ್ದ ಸೌಲಭ್ಯಕ್ಕೆ ತಾವೇ ಕೊಳ್ಳಿ ಇಟ್ಟುಕೊಂಡರು ಎನ್ನುವುದನ್ನು ಮೇಲಿನ ಉಪಮೆಗಳ ಮೂಲಕ ವಿವರಿಸಬೇಕಾಯಿತು.

ರಾಜ್ಯ ರಾಜಕಾರಣದಲ್ಲಿ ಬೇರೆ ಬೇರೆ ಕಾರಣಕ್ಕೆ ಬಹಳ ಚರ್ಚೆಯಲ್ಲಿರುವ ಇಬ್ಬರು ನಾಯಕರ ಬಗ್ಗೆ ಇಲ್ಲಿ ಚರ್ಚಿಸುವುದು ಬಹಳ ಪ್ರಸ್ತುತ ಕೂಡ. ಎಲ್ಲಾ ವಿಧದಲ್ಲೂ ಮಹತ್ತರ ‘ನಾಯಕ’ರಾಗಬೇಕಿದ್ದ ಮಾಧುಸ್ವಾಮಿ ಒಬ್ಬರಾದರೆ ಸಾಕ್ಷಾತ್ ಸಿಎಂ ಆಗುವ ಎಲ್ಲ ಅರ್ಹತೆಗಳಿರುವ ಯತ್ನಾಳ್ ಮತ್ತೊಬ್ಬರು..! ಈ ಇಬ್ಬರು ಧುರೀಣರು ಇಂದು ತಮ್ಮ ಹರಿತ ನಾಲಗೆಯನ್ನು ಹರಿಯ ಬಿಡುವ ಮೂಲಕ ಇನ್ನಿಲ್ಲದ ಯಡವಟ್ಟುಗಳನ್ನು ತಂದುಕೊಂಡಿರುವುದೇ ಆತಂಕಕಾರ ಲಕ್ಷಣ. ಇದಕ್ಕೆ ಒಂದು ಸಣ್ಣ ಫ್ಲಾಶ್ಬ್ಯಾಕ್ ಹೋದರೆ ಎಲ್ಲವೂ ಕ್ಲಿಯರ್ ಆಗುತ್ತದೆ. ಸಂಪುಟ ವಿಸ್ತರಣೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಹಲವು ಬಿಜೆಪಿ ಶಾಸಕರು ವಾಗ್ದಾಳಿ ಶುರುವಿಟ್ಟಿದ್ದರು. ಖಾತೆ ಹಂಚಿಕೆ ಬಳಿಕ ಕೆಲವು ಸಚಿವರೂ ಯಡಿಯೂರಪ್ಪ ಅವರ ಮೇಲೆ ಮುನಿಸಿಕೊಂಡಿದ್ದರು. (ಅದು ಈಗಲೂ ಜಾರಿಯಲ್ಲಿದೆ) ಇದರಿಂದ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಬಳಿಕ ಬಹಳಷ್ಟು ವಿರೋಧವನ್ನು ಮುಖ್ಯಮಂತ್ರಿ ಎದುರಿಸುತ್ತಿರುವುದು ವರ್ತಮಾನದ ಸತ್ಯ.

ಇನ್ನೊಂದು ಹೆಜ್ಜೆ ಮುಂದಿಟ್ಟ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಬತ್ತಳಿಕೆಯಲ್ಲಿದ್ದ ಎಲ್ಲಾ ಅಸ್ತ್ರಗಳನ್ನು ಆಯ್ದಾಯ್ದ ಶಬ್ದಗಳಿಂದ ಪ್ರಯೋಗಿಸಿ ವಿರೋಧಿಗಳಿಗೆ ಆಹಾರವಾದರು..! ಇದಕ್ಕೆ ಬಿಜೆಪಿಯಲ್ಲೇ ಇರುವ ಹಲವು ಗಣ್ಯರ ಬೆಂಬಲವಿದೆ ಎನ್ನವ ಆರೋಪವೂ ಉಂಟು. ಅದು ಇಲ್ಲಿ ವಿಷಯಾಂತರದ ವಿಷಯ. ಗಮನಿಸಬೇಕಾದ ವಿಷಯವೆಂದರೆ ಯತ್ನಾಳ್ ಅವರ ಹೇಳಿಕೆಗಳಿಂದ ಯಡಿಯೂರಪ್ಪ ಅವರು ಸಾಕಷ್ಟು ಮುಜುಗುರವನ್ನು ಅನುಭವಿಸಿದ್ದಾರೆ. ಇದೀಗ ಹೈಕಮಾಂಡ್ ಗಮನಕ್ಕೂ ಬಂದಿರುವುದು ಗುಟ್ಟಿನ ವಿಷಯವಲ್ಲ.

ಇಷ್ಟೆಲ್ಲ ಆಗುತ್ತಿದ್ದರೂ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪಗಳನ್ನು ಸಿಎಂ ಯಡಿಯೂರಪ್ಪ ಅವರ ಆಪ್ತರು ಮಾಡುತ್ತಿದ್ದಾರೆ. ಇದೀಗ ಬಿಜೆಪಿ ವರಿಷ್ಠರು ಕೊನೆಗೂ ಯತ್ನಾಳ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನುವುದು ಕಟೀಲ್ ಅವರ ವಾದ. ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಪಕ್ಷ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಮುಜುಗುರವನ್ನುಂಟು ಮಾಡುತ್ತಿದ್ದಾರೆ. ಅವರ ಹೇಳಿಕೆ ಗಳನ್ನು, ಅವರು ಮುಜುಗರ ಉಂಟು ಮಾಡುತ್ತಿರುವುದನ್ನು ಕೇಂದ್ರದ ಶಿಸ್ತು ಸಮಿತಿ ಗಮನಕ್ಕೆ ತಂದಿದ್ದೇವೆ. ಪಕ್ಷದ ವೇದಿಕೆಯಲ್ಲಿ ಆ ಬಗ್ಗೆ ಚರ್ಚಿಸಿ ಅದನ್ನು ಸರಿಪಡಿಸಲಾಗುವುದು ಎನ್ನುವ ಕಟೀಲ್ ಹೇಳಿಕೆ ತೀರ ಪೇಲವತೆ ಸಾಕ್ಷಿ. ಯತ್ನಾಳ್ ವಿರುದ್ಧ ಶಿಸ್ತುಕ್ರಮ ಪ್ರಯೋಗಕ್ಕೆ ಬಂದಾಗ ಯಾವ ಸ್ಫೋಟ ಆಗುವುದೋ..ಅದರ ತೀವ್ರತೆ ಎಷ್ಟಿರುತ್ತೋ..?!

ಯಡಿಯೂರಪ್ಪನವರ ಸಂಪುಟ ವಿಸ್ತರಣೆಯ ಬಳಿಕ ಖಾತೆ ಹಂಚಿಕೆಯಲ್ಲಿ ದೊಡ್ಡ ಹಿನ್ನಡೆಯಾಗಿರುವ ಮುಖಂಡರ ಪೈಕಿ, ಚಿಕ್ಕನಾಯಕನಹಳ್ಳಿ ಶಾಸಕ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಕೂಡಾ ಒಬ್ಬರು. ಇವರ ಬಳಿಯಿದ್ದ ಖಾತೆಯನ್ನು ಹೆಚ್ಚುವರಿಯಾಗಿ ಬಸವರಾಜ ಬೊಮ್ಮಾಯಿಯವರಿಗೆ ನೀಡಿದ್ದು ಅವರನ್ನು ಕೆರವಳುವಂತೆ ಮಾಡಿದ್ದು ಗೊತ್ತೇ ಇದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಹೊಂದಿದ್ದ ಜೆ.ಸಿ.ಮಾಧುಸ್ವಾಮಿಯವರಿಗೆ ಈಗ ವೈದ್ಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ನೀಡಲಾಗಿದೆ. ಅವರ ಹಿಂದಿನ ಖಾತೆ ಬೊಮ್ಮಾಯಿ ಪಾಲಾಗಿದೆ.

ಸಂಸದೀಯ ಇಲಾಖೆ ನೇರವಾಗಿ ಸಚಿವ ಸಂಪುಟ ಸಭೆಯ ತೀರ್ಮಾನವನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವಂತಹ ಇಲಾಖೆ. ಜೊತೆಗೆ ಅಧಿವೇಶನದ ವೇಳೆಯೂ ಈ ಇಲಾಖೆಯ ಪಾತ್ರ ಮಹತ್ವದ್ದು. ಸರಕಾರದ ಕಾರ್ಯಕ್ರಮಗಳನ್ನು ಅಧಿವೇಶನದಲ್ಲಿ ಮೊದಲು ಮಂಡಿಸುವುದು, ವಿರೋಧ ಪಕ್ಷಗಳ ವಿಶ್ವಾಸವನ್ನೂ ಗಳಿಸುವುದು ಪ್ರಮುಖವಾಗಿರುತ್ತದೆ. ಆದರೆ, ಇದನ್ನೆಲ್ಲಾ ಮಾಧುಸ್ವಾಮಿಯವರು ಸಮರ್ಥವಾಗಿ ನಿಭಾಯಿಸಿಕೊಂಡು ಬಂದರು ಎಂದು ಹೇಳುವುದಕ್ಕೆ ಹಲವು ಅಪವಾದಗಳಿವೆ. ಬಹಳ ಮುಖ್ಯವಾಗಿ ಯಾರೇ ಆಗಿರಲಿ, ಆತ ಒಬ್ಬ ರಾಜಕಾರಣಿ ಯಾಗಿ, ಪ್ರಮುಖ ನಾಯಕನಾಗಿ ಬೆಳಕಿಗೆ ಬಂದ ಮೇಲೆ ಮಾತಿನ ಮೇಲೆ ಸಂಯಮ ಅತ್ಯಗತ್ಯ. ತನ್ನವರ ಬಿಡಿ, ಎದುರಿಗಿದ್ದವರನ್ನು ಆದರಿಸುವುದು, ಅವರನ್ನು ಗೌರವಿಸುವುದು ಒಂದು ಸಂಸ್ಕಾರ. ಈ ಎಲ್ಲೆಯನ್ನು ಮಾಧುಸ್ವಾಮಿ ಬಹಳಷ್ಟು ಸಲ ಮೀರಿದ್ದಾರೆ..!

ಸಾರ್ವಜನಿಕವಾಗಿ ಅವರ ಭಾಷೆ, ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಕೆಲವೊಂದು ಸ್ಯಾಂಪಲ್ ಗಳನ್ನು ಇಲ್ಲಿ ಉಲ್ಲೇಖಿಸಬಹುದು. ವಿಧಾನಮಂಡಲದ ಅಧಿವೇಶನ ವಿಧಾನಮಂಡಲದ ಅಧಿವೇಶನ ದಲ್ಲಿ ಹಲವು ಬಾರಿ ಸರಕಾರ, ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಮುಜುಗರದಿಂದ ಮಾಧುಸ್ವಾಮಿ ಪಾರು ಮಾಡಿದ್ದು ಅವರ ಹೆಚ್ಚುಗಾರಿಕೆ. ವಿರೋಧ ಪಕ್ಷದವರ ಟೀಕೆಗೂ ಕೌಂಟರ್ ನೀಡುವಲ್ಲಿ ಇವರು ಯಶಸ್ವಿಯಾಗಿದ್ದನ್ನು ಸ್ಮರಿಸಬಹುದು. ಆದರೆ ಸಾರ್ವಜನಿಕವಾಗಿ ಮಾಧುಸ್ವಾನಿ ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ, ಇವರಿಗೆ ಸಂಸದೀಯ ವ್ಯವಹಾರ ಖಾತೆ ಕೈತಪ್ಪಿ ಹೋಗಿದೆ ಎನ್ನುವ ಮಾತು ಚರ್ಚೆಗೆ ಗ್ರಾಸವೊದಗಿಸುತ್ತದೆ. ಅವರದೇ ಅವಾಜ್ ಇಲ್ಲಿ ಹೀಗೆ ಉಲ್ಲೇಖಿಸುವುದು ಸೂಕ್ತ.

https://kannada.newsnext.live/soudhasuli-cd-explosion-in-flames-war-against-close-yediyurappa-close-mla/

‘ಝಾಡ್ಸಿ ಒದ್ದುಬಿಟ್ರೆ ಎಲ್ಲಿಗೆ ಹೋಗಿ ಬೀಳ್ತಿಯಾ ಗೊತ್ತಾ ನೀನೀಗಾ?, ರಾಸ್ಕಲ್ ಕತ್ತೆ ಕಾಯೋಕೆ ಹೇಳಿದ್ನಾ ಇಲ್ಲಿ?, ಯಾವ ಸೋಪು ನಿನ್ನ ಹೆಂಡತಿ ಸೀರೆ ತೊಳೆಯೋಕೆ ತಗೋಂಡು ಹೋಗೋದು. ರಾಸ್ಕಲ್ಸ್ ಏನ್ ತಿಳಿದುಕೊಂಡಿದ್ದೀರಾ?, ರೆಸಲ್ಯೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ – ಮಾಧುಸ್ವಾಮಿ ಈ ರೀತಿ ತುಮಕೂರು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಗೆ ನಾಡಿನ ಜನತೆ ಬೆಚ್ಚಿ ಬಿದ್ದಿದ್ದರು. ವಿರೋಧದ ಪ್ರವಾಹ ಹರಿದು ಬಂದ ಕೂಡಲೇ ಅವರು ವಿಷಾದ ವ್ಯಕ್ತ ಪಡಿಸಿದ್ದನ್ನು ಮತ್ತೆ ಹೇಳಬೇಕಿಲ್ಲ. ಈ ಇಬ್ಬರ ನಾಯಕರ ಜೊತೆ ಜೊತೆಗೆ ಹಳ್ಳಿಹಕ್ಕಿ ಹೊರತಾಗಿ ರೇಣುಕಾಚಾರ್ಯ, ಬೆಲ್ಲದ್ ಸೇರಿದಂತೆ ಅನೇಕರು ತಮ್ಮ ಒಡಕು ಮಾತಿಗೆ ಹೆಸರಾದರೂ ಅವರಷ್ಟು ಖಡಕ್ ಮಾತು ಇವರದಾಗಿರಲ್ಲ..!

ವರ್ತಮಾನದ ಸತ್ಯ: ಸತ್ಯ ಎಂದಿಗೂ ಮೂದಿ ಮುಚ್ಚಿದ ಕೆಂಡ. ಅದರ ತಿದಿ ಕಿಡಿಯಾಗಿ ಹೊರಬಿದ್ದಾಗ ಕೆಂಡವಾಗಿ ಅರಳುತ್ತದೆ..!

Comments are closed.