ಬೆಂಗಳೂರು : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ರಾಜ್ಯ ಸರಕಾರಿ ನೌಕರರಿಗೆ ಬಿಗ್ ಶಾಕ್ ಕೊಟ್ಟಿದೆ. ರಾಜ್ಯ ಸರಕಾರದ ಬೊಕ್ಕಸಕ್ಕೆ ಎದುರಾಗುವ ಆರ್ಥಿಕ ಸಂಕಷ್ಟದಿಂದ ಪಾರಾಗುವ ನಿಟ್ಟಿನಲ್ಲಿ ನೌಕರರ ತುಟ್ಟಿಭತ್ಯೆಗೆ ಕತ್ತರಿ ಹಾಕಿದೆ. ಹೀಗಾಗಿ ಮುಂದಿನ 2021ರ ಜನವರಿ ವರೆಗೆ ತುಟ್ಟಿ ಭತ್ಯೆಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಪ್ರತೀ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರಿಗೆ ಜನವರಿ ಹಾಗೂ ಜೂನ್ ತಿಂಗಳಿನಲ್ಲಿ ತುಟ್ಟಿಭತ್ಯೆ ನೀಡಲಾಗುತ್ತಿತ್ತು. ವೇತನದ ಕನಿಷ್ಠ ಶೇ.3ರಿಂದ ಗರಿಷ್ಠ ಶೇ.12ರಷ್ಟು ತುಟ್ಟಿ ಭತ್ಯೆಯನ್ನು ಏರಿಕೆ ಮಾಡಲಾಗುತ್ತಿತ್ತು. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆಗೆ ಕತ್ತರಿ ಹಾಕಿದ್ದು, ಇದೀಗ ರಾಜ್ಯ ಸರಕಾರ ಕೂಡ ತನ್ನ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಕಡಿತಗೊಳಿಸಿದೆ. ಸರಕಾರ ಆದೇಶ ಜನವರಿ 2020ರಿಂದಲೇ ಅನ್ವಯವಾಗಲಿದೆ. ಹೀಗಾಗಿ ಜನವರಿ ಹಾಗೂ ಜೂನ್ ತಿಂಗಳ ತುಟ್ಟಿಭತ್ಯೆ ನೌಕರರಿಗೆ ಸಿಗುವುದಿಲ್ಲ.



ಕಳೆದ ವರ್ಷವಷ್ಟೇ 6ನೇ ವೇತನ ಆಯೋಗದ ವರದಿಯನ್ನು ಜಾರಿಗೆ ತಂದಿದ್ದು, ವೇತನ ಏರಿಕೆ ಮಾಡಿದೆ. ಅಲ್ಲದೇ ಸಂಪೂರ್ಣವಾಗಿ ವರದಿಯನ್ನು ಮಂಡಿಸೋದಾಗಿ ಸರಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸರಕಾರಿ ನೌಕರರು ತುಟ್ಟಿ ಭತ್ಯೆ ಏರಿಕೆಯ ಖುಷಿಯಲ್ಲಿದ್ದರು, ಆದರೆ ಕೊರೊನಾ ಸರಕಾರಿ ನೌಕರರಿಗೆ ಬಿಗ್ ಶಾಕ್ ಕೊಟ್ಟಿದೆ. ಬೆಲೆ ಏರಿಕೆಯ ಆಧಾರದ ಮೇಲೆ ಪ್ರತೀ ವರ್ಷವೂ ತುಟ್ಟಿ ಭತ್ಯೆ ಏರಿಕೆಯಾಗೋದ್ರಿಂದ ಪ್ರತೀ 5 ವರ್ಷಕ್ಕೊಮ್ಮೆ ವೇತನ ಆಯೋಗದ ವರದಿ ಜಾರಿಯಾಗುವಾಗ ವೇತನದಲ್ಲಿ ಶೇ.20 ರಷ್ಟು ಏರಿಕೆಯಾಗುತ್ತಿತ್ತು.

ಆದ್ರೀಗ ಒಂದು ವರ್ಷದ ತುಟ್ಟಿ ಭತ್ಯೆ ಏರಿಕೆಗೆ ಕತ್ತರಿ ಹಾಕಿರೋದ್ರಿಂದಾಗಿ ವೇತನ ಏರಿಕೆಯಿಲ್ಲದೇ ಕಾರ್ಯನಿರ್ವಹಿಸಬೇಕಿದೆ. ರಾಜ್ಯದಲ್ಲಿ ಎನ್ ಪಿಎಸ್ ನೌಕರರಿಗೆ ತುಟ್ಟಿ ಭತ್ಯೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ಈಗಾಗಲೇ ವೇತನದಲ್ಲಿ ಶೇ.10 ರಷ್ಟು ಹಣವನ್ನು ಎನ್ ಪಿಎಸ್ ಗೆ ಕಡಿತ ಮಾಡಲಾಗುತ್ತಿದ್ದು, ಇದೀಗ ತುಟ್ಟಿ ಭತ್ಯೆಯೂ ಇಲ್ಲದಿದ್ರೊಂದಾಗಿ ಸಂಕಷ್ಟಕ್ಕೆ ಸಿಲುಕಲಿದ್ದೇವೆ ಅಂತಾ ಅಳಲು ತೋಡಿಕೊಂಡಿದ್ದಾರೆ. ಇನ್ನು ತುಟ್ಟಿಭತ್ಯೆ ವಿಚಾರದಲ್ಲಿ ಕೇಂದ್ರ ಸರಕಾರದ ನೀತಿಯನ್ನು ಅನುಸರಿಸುವ ರಾಜ್ಯ ಸರಕಾರ ಕೇಂದ್ರ ಸರಕಾರದಂತೆ ವೇತನ ಕೊಡುವಲ್ಲಿ ಯಾಕೆ ಅನುಸರಿಸುತ್ತಿಲ್ಲವೆಂದು ನೊಂದ ನೌಕರರು ಪ್ರಶ್ನಿಸುತ್ತಿದ್ದಾರೆ.