ವಿದೇಶಗಳಿಂದ ಮೊದಲ ಹಂತದಲ್ಲಿ 14,800 ಮಂದಿ ಭಾರತೀಯರ ಲಿಫ್ಟ್ : ಉಚಿತವಲ್ಲ ಸ್ವದೇಶಿ ಪ್ರಯಾಣ, ಯಾವ ರಾಜ್ಯಕ್ಕೆ ಎಷ್ಟು ದರ ಗೊತ್ತಾ ?

0

ನವದೆಹಲಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗಿದೆ. ಮೊದಲ ಹಂತದಲ್ಲಿ 14,800 ಮಂದಿಯನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಆದ್ರೆ ಪ್ರಯಾಣದ ವೆಚ್ಚವನ್ನು ವಿದೇಶಗಳಲ್ಲಿ ಸಿಲುಕಿರುವವರೇ ಭರಿಸಬೇಕಾಗಿದ್ದು, ಕೇಂದ್ರ ಸರಕಾರ ಪ್ರಯಾಣ ದರವನ್ನು ಫಿಕ್ಸ್ ಮಾಡಿದೆ.

ದೆಹಲಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಕೊರೊನಾ ವೈರಸ್ ಸೋಂಕಿನಿಂದ ಎದುರಾಗಿರುವ ಲಾಕ್ ಡೌನ್ ನಲ್ಲಿ ಸಿಲುಕಿರುವ ಸುಮಾರು 2 ಲಕ್ಷ ಮಂದಿ ಭಾರತೀಯರನ್ನು ಮೇ 7ರಿಂದ ವಿಶೇಷ ವಿಮಾನದಲ್ಲಿ ಅವರ ಮನೆಗೆ ತಲುಪಿಸಲಾಗುತ್ತದೆ.

ಸ್ವದೇಶಕ್ಕೆ ಹಿಂದಿರುಗುವ ಭಾರತೀಯ ಸಂಖ್ಯೆ 2 ಲಕ್ಷಕ್ಕಿಂತಲೂ ಅಧಿಕವಿದ್ದು, ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆರಂಭದ ಹಂತದಲ್ಲಿ ಸ್ವದೇಶಕ್ಕೆ ಮರಳಲು ಇಚ್ಚಿಸಿರುವ 2 ಲಕ್ಷ ಜನರನ್ನು ಸ್ವದೇಶಕ್ಕೆ ಕರೆತರಲು ಸಿದ್ದತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಸುಮಾರು 14,800 ಭಾರತೀಯ ಪ್ರಜೆಗಳನ್ನು ಮನೆಗೆ ಕರೆತರಲು ಸರ್ಕಾರ ಮೇ 7 ರಿಂದ 13 ರವರೆಗೆ 64 ವಿಮಾನಗಳು ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

ಭಾರತದಿಂದ ವಿಮಾನಗಳು ಯುಎಸ್, ಫಿಲಿಪೈನ್ಸ್, ಸಿಂಗಾಪುರ್, ಬಾಂಗ್ಲಾದೇಶ, ಯುಎಇ, ಯುಕೆ, ಸೌದಿ ಅರೇಬಿಯಾ, ಕತಾರ್, ಸಿಂಗಾಪುರ್, ಓಮನ್, ಬಹ್ರೇನ್ ಮತ್ತು ಕುವೈತ್‌ ದೇಶಗಳಿಂದ ಪ್ರಯಾಣಿಕರನ್ನು ಕರೆತರಲಾಗುತ್ತಿದೆ. ಕೇರಳ ರಾಜ್ಯಕ್ಕೆ ಬರೋಬ್ಬರಿ 15 ವಿಮಾನಗಳನ್ನು ನೀಡಲಾಗುತ್ತಿದ್ರೆ, ದೆಹಲಿ -ಎನ್ ಸಿಆರ್ ಮತ್ತು ತಮಿಳುನಾಡಿಗೆ 11 ವಿಮಾನ, ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ 7, ಗುಜರಾತ್ ಗೆ 5, ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕಕ್ಕೆ ತಲಾ 3 ವಿಮಾನ ನೀಡಲಾಗುತ್ತಿದೆ.

ಇನ್ನು ಪಂಜಾಬ್ ಮತ್ತು ಉತ್ತರ ಪ್ರದೇಶಕ್ಕೆ ತಲಾ 1 ವಿಶೇಷ ವಿಮಾನಗಳನ್ನು ಕಳುಹಿಸಿಕೊಡಲಾಗುತ್ತಿದೆ. ಏರ್ ಇಂಡಿಯಾ ಹಾಗೂ ಅದರ ಅಂಗ ಸಂಸ್ಥೆಯಾಗಿರುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ಕಾರ್ಯನಿರ್ವಹಿಸಲಿವೆ. ಪ್ರತೀ ವಿಮಾನಗಳು 200 ರಿಂದ 300 ಪ್ರಯಾಣಿಕರನ್ನು ಹೊತ್ತು ಬರಲಿದ್ದು, ವಿಮಾನದಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

ಮೊದಲ ಹಂತದಲ್ಲಿ ಸುಮಾರು 13 ದೇಶಗಳಿಂದ 14,800ಕ್ಕೂ ಹೆಚ್ಚು ಭಾರತೀಯರನ್ನು ಸುಮಾರು 64 ವಿಮಾನಗಳಲ್ಲಿ ಕರೆತರಲಾಗುತ್ತಿದೆ. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಉಚಿತವಾಗಿ ಕರೆತರಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಕೇಂದ್ರ ಸರಕಾರ ವಿಮಾನದ ಪ್ರಯಾಣದರವನ್ನು ನಿಗದಿಪಡಿಸಿದೆ. ಲಂಡನ್‌ನಿಂದ ಮುಂಬೈ, ದೆಹಲಿ ಅಥವಾ ಬೆಂಗಳೂರಿಗೆ ವಿಮಾನ ಪ್ರಯಾಣದರವನ್ನು 50,000 ರೂ., ಅಮೇರಿಕಾದ ನೆವಾರ್ಕ್, ಚಿಕಾಗೊ ಅಥವಾ ಸ್ಯಾನ್ ಫ್ರಾನ್ಸಿಸ್ಕೋದಿಂದ ಪ್ರಯಾಣಿಸಲು 1 ಲಕ್ಷ ರೂ.

ದುಬೈ 13,000 ರೂ., ಅಬುದಾಬಿ 15,000 ರೂ. ವೆಚ್ಚವಾಗಲಿದ್ದು, ಸಿಂಗಾಪುರದಿಂದ ದೆಹಲಿ ಮತ್ತು ಅಹಮದಾಬಾದ್‌ಗೆ ಪ್ರಯಾಣಿಸುವ ವಿಮಾನಗಳ ಟಿಕೆಟ್ ಬೆಲೆಯನ್ನು 20,000 ರೂ.ಗಳಿಗೆ ನಿಗದಿ ಪಡಿಸಲಾಗಿದೆ. ಇನ್ನು ಢಾಕಾದಿಂದ ದೆಹಲಿಗೆ 12,000 ರೂ., ಶ್ರೀನಗರಕ್ಕೆ 15,000 ರೂ., ಕುವೈತ್ ನಿಂದ ಅಹಮದಾಬಾದ್ ಗೆ 14,000ರೂ., ಮತ್ತು ಹೈದ್ರಾಬಾದ್ ಗೆ 20,000 ರೂ., ಟಿಕೆಟ್ ಬೆಲೆಯನ್ನು ನಾಗರೀಕ ವಿಮಾನಯಾನ ಸಚಿವಾಲಯ ನಿಗದಿ ಪಡಿಸಿದೆ.

ವಿದೇಶಗಳಿಂದ ಮರಳುವವರನ್ನು ಕಡ್ಡಾಯವಾಗಿ ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಿಶೇಷ ವಿಮಾನಗಳನ್ನು ಹತ್ತುವ ಮೊದಲು ಪ್ರಯಾಣಿಕರನ್ನು ಜ್ವರ, ಕೆಮ್ಮು, ಮಧುಮೇಹ ಅಥವಾ ಯಾವುದೇ ಉಸಿರಾಟದ ಸಮಸ್ಯೆಯಿದೆಯೇ ಅನ್ನುವ ಬಗ್ಗೆ ತಪಾಸಣೆ ನಡೆಸಲಾಗುತ್ತದೆ. ರೋಗ ಲಕ್ಷಣಗಳು ಇಲ್ಲದ ವ್ಯಕ್ತಿಗಳನ್ನು ಮಾತ್ರವೇ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ.

ಮಾತ್ರವಲ್ಲ ಸ್ವದೇಶಕ್ಕೆ ಮರಳಿದ ನಂತರ ಆಸ್ಪತ್ರೆ ಅಥವಾ ಸರಕಾರಿ ಸೌಲಭ್ಯದಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ನಡೆಸಲಾಗುತ್ತದೆ. ಅಲ್ಲದೇ ಕ್ವಾರಂಟೈನ್ ಅವಧಿ ಮುಕ್ತಾಯವಾದ ನಂತರದಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡೇ ಮನೆಗಳಿಗೆ ಕಳುಹಿಸಲಾಗುತ್ತದೆ.

ಇನ್ನು ಭಾರತೀಯ ನೌಕಾಪಡೆಯು ವಿದೇಶದಲ್ಲಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆಯನ್ನು ಭಾಗಿಯಾಗಲಿದೆ. ಭಾರತೀಯ ನೌಕಾದಳದ ಮೂರು ಹಡಗುಗಳು ಪಶ್ಚಿಮ ಏಷ್ಯಾ ಮತ್ತು ಮಾಲ್ಡೀವ್ಸ್‌ನ ಭಾರತೀಯ ಪ್ರಜೆಗಳನ್ನು ಕರೆತರಲಿದೆ ಎಂದಿದ್ದಾರೆ.

Leave A Reply

Your email address will not be published.