ಗಡ್ಡೆಗೆಣಸು ತಿನ್ನೋದಕ್ಕೆ ಹಿಂದೆಲ್ಲಾ ಗುಡ್ಡಗಾಡು ಅಲೆಯಬೇಕಿತ್ತು. ಆದಿ ಮಾನವರು ಇದೇ ಗಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ರು. ಅದ್ರಲ್ಲೂ ಸಿಹಿ ಗೆಣಸನ್ನು ಸುಟ್ಟು, ಇಲ್ಲಾ ಬೇಯಿಸಿ ತಿನ್ನುತ್ತಾರೆ. ಆದರೆ ಗೆಣಸಿನ ಜ್ಯೂಸ್ ಯಾವತ್ತಾದ್ರೂ ಕುಡಿದಿದ್ದೀರಾ. ಈ ಗೆಣಸಿನ ಜ್ಯೂಸ್ ನಮ್ಮ ದೇಹಕ್ಕೆ ಎಂತಹ ಚಮತ್ಕಾರವನ್ನು ಮಾಡುತ್ತೇ ಅನ್ನೋದು ನಿಮಗೆ ಗೊತ್ತಾ ?

ನೆಲದ ಅಡಿಯಲ್ಲಿ ಬೆಳೆಯುವ ಗೆಣಸು ಪೋಷಕಾಂಶಗಳ ಆಗರ. ಗೆಣಸಿನಲ್ಲಿ ಕ್ಯಾರೋಟಿನ್, ಕೊಬ್ಬಿನಾಂಶ, ತಾಮ್ರ, ಫಾಲಟ್ ಮತ್ತು ಮೆಗ್ನಿಶಿಯಂ ಹೇರಳ ಪ್ರಮಾಣದಲ್ಲಿದೆ. ಅತೀ ಹೆಚ್ಚು ಪ್ರಮಾಣದಲ್ಲಿ ನಾರಿನಂಶವನ್ನು ಹೊಂದಿರುವುದರಿಂದ ಗೆಣಸು ಮಾನವನ ಆರೋಗ್ಯಕ್ಕೆ ಹೆಚ್ಚಿನ ಲಾಭಗಳನ್ನು ಒದಗಿಸಲಿದೆ. ಅದರಲ್ಲೂ ಗೆಣಸಿನಿಂದ ಮಾಡಿದಂತಹ ಜ್ಯೂಸ್ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ.

ಸಿಹಿ ಗೆಣಸಿನ ತುಂಡುಗಳನ್ನು ರುಬ್ಬಿಕೊಂಡು ತಿರುಳನ್ನು ತೆಗೆದು ರಸ ಹಿಂಡಬೇಕು. ರುಚಿಗೆ ತಕ್ಕಷ್ಟು ಕ್ಯಾರೆಟ್ ಮತ್ತು ಶುಂಠಿಯನ್ನು ಬಳಕೆ ಮಾಡಬಹುದು. ಸಿಹಿ ಗೆಣಸಿನಲ್ಲಿ ವಿಟಮಿನ್ ಸಿ, ಬಿ2, ಬಿ6, ಇ ಮತ್ತು ಬಿಯೊಟಿನ್ ಸಮೃದ್ದವಾಗಿದೆ.

ಮಾತ್ರವಲ್ಲ ಸಿಹಿ ಗೆಣಸಿನಲ್ಲಿ ಪಾಂಟೊಥೆನಿಕ್ ಆಮ್ಲದ ಜೊತೆಗೆ ಆಹಾರದ ನಾರಿನಾಂಶವಿದೆ. ಕಡಿಮೆ ಕ್ಯಾಲರಿ ಮತ್ತು ಅಧಿಕ ಪ್ರೋಟೀನ್ ಇರುವುದರಿಂದ ನಿತ್ಯವೂ ಗೆಣಸಿನ ಜ್ಯೂಸ್ ಕುಡಿದರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಭ್ರೂಣದ ಬೆಳವಣಿಗೆಗೆ ಸಹಕಾರಿ
ಸಿಹಿ ಗೆಣಸಿನಲ್ಲಿ ಹೇರಳ ಪ್ರಮಾಣದಲ್ಲಿ ಪ್ಲೋರಿಕ್ ಆಮ್ಲವಿರುವುದರಿಂದ ಗರ್ಭಿಣಿಯರಿಗೆ ಹೆಚ್ಚು ಸಹಕಾರಿಯಾಗಿದೆ. ಗರ್ಭಿಣಿ ಮಹಿಳೆಯರು ಗೆಣಸು ತಿನ್ನುವುದರಿಂದ ಭ್ರೂಣದ ಕೋಶಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಮಾತ್ರವಲ್ಲ ಗರ್ಭಿಣಿಯರ ಆರೋಗ್ಯವನ್ನೂ ಕೂಡ ಗೆಣಸು ವೃದ್ದಿಸುತ್ತದೆ.

ಮಧುಮೇಹಿ ಪಾಲಿಗೆ ಸಂಜೀವಿನಿ
ನೆಲದಡಿಯಲ್ಲಿ ಬೆಳೆಯೋ ಸಿಹಿ ಗೆಣಸು ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಬಿಟಾ ಕೆರೊಟಿನ್ ಹೆಚ್ಚಾಗಿರುವ ಈ ಸಿಹಿ ಗೆಣಸಿನಲ್ಲಿ ಆರೋಗ್ಯದ ದೃಷ್ಟಿಯಿಂದ ಮಧುಮೇಹಿ ರೋಗಿಗಳಿಗೆ ಅತ್ಯುತ್ತಮವಾದ ಆಹಾರ. ಸಿಹಿ ಗೆಣಸಿನಲ್ಲಿರುವ ಆಕ್ಟೋಜಿನಿನ್ ಅಂಶ ಮಧುಮೇಹದ ವಿರುದ್ದ ಹೋರಾಟವನ್ನು ಮಾಡುತ್ತದೆ. ಹೀಗಾಗಿ ಮಧುಮೇಹಿಗಳು ಗೆಣಸನ್ನು ತಿನ್ನುವುದರಿಂದ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ.

ಮೂಳೆಯ ಆರೋಗ್ಯ ವೃದ್ದಿ
ಸಿಹಿ ಗೆಣಸಿನಲ್ಲಿರುವ ಪೊಟ್ಯಾಶಿಯಂ ಅಂಶ ಮೂಳೆಯನ್ನು ಸದೃಢವಾಗಿಸುತ್ತದೆ. ಮೂಳೆಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸ್ನಾಯು ಸೆಳೆತ ಉಂಟಾಗದಂತೆ ತಡೆಯುತ್ತದೆ. ಸಿಹಿ ಗೆಣಸು ತಿನ್ನುವುದರಿಂದ ಮೂಳೆಯ ಆರೋಗ್ಯ ವೃದ್ದಿಸುವುದರಿಂದ ಕ್ರೀಡಾಪಟುಗಳು ಹೆಚ್ಚಾಗಿ ಗೆಣಸು ಸೇವನೆ ಮಾಡುವುದು ಉತ್ತಮ.

ಹೃದ್ರೋಗವನ್ನು ತಡೆಯುತ್ತದೆ
ಸಿಹಿಗೆಣಸಿನಲ್ಲಿ ಪೊಟ್ಯಾಶಿಯಂ ಅಂಶವಿದ್ದು, ಪೊಟ್ಯಾಶಿಯಂ ದೇಹದ ಮೇಲೆ ಸೋಡಿಯಂ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಹೃದಯ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸಹಕರಿಸುವುದರ ಜೊತೆಗೆ ರಕ್ತದ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಎಲೆಕ್ಟ್ರೋಲೈಟ್, ವಿಟಮಿನ್ 6 ಪಾರ್ಶ್ವವಾಯು ವನ್ನು ತಡೆಯುವುದರ ಜೊತೆಗೆ ಹೃದ್ರೋಗದ ವಿರುದ್ದ ನಿಯಂತ್ರಣವನ್ನು ಹೇರುತ್ತದೆ.

ಕ್ಯಾನ್ಸರ್ ತಡೆಯುತ್ತದೆ
ಸಿಹಿಗೆಣಸಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಹೆಚ್ಚಾಗಿದ್ದು ಗೆಣಸಿನಲ್ಲಿರುವ ಬೀಟಾ ಮತ್ತು ಕೆರೋಟಿನ್ ಅಂಶ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಿಂದ ಮುಕ್ತಿನೀಡುತ್ತದೆ. ಮಾತ್ರವಲ್ಲ ಅಸ್ತಮಾ, ಸಂಧಿವಾತ ಮತ್ತು ಅರ್ಥರಿಟಿಸ್ ಸಮಸ್ಯೆಗಳಿಗೂ ಉಪಶಮನ ನೀಡುತ್ತದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯ ನಡೆದ ಅಧ್ಯಯನದ ಪ್ರಕಾರ ಕ್ಯಾರೋಟಿನಾಯ್ಡ್ ಭರಿತ ಆಹಾರ ಸೇವೆ ಮಾಡುವವರಲ್ಲಿ ಕ್ಯಾನ್ಸರ್ ನ ಅಪಾಯವು ಶೇ.32 ರಷ್ಟು ಕಡಿಮೆಯಾಗಿದೆ. ಗೆಣಸಿನಲ್ಲಿರುವ ಕೋಲನ್ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ. ಅಲ್ಲದೇ ಡಯಟೆರಿ ಫೈಬರ್ ಅಂಶವು ಜೀರ್ಣಕ್ರೀಯೆಯನ್ನು ಸುಗಮಗೊಳಿಸುತ್ತದೆ.