
ಬೆಂಗಳೂರು : ನಂಜನಗೂಡು ತಾಲೂಕು ವೈದ್ಯಾಧಿಕಾರಿಗಳ ಡಾ.ನಾಗೇಂದ್ರ ಸಾವಿನ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಒಂದಡೆ ವೈದ್ಯರು ಪ್ರತಿಭಟನೆ ನಡೆಸಬೇಕೇ ? ಇಲ್ಲಾ ಸರಕಾರದ ಭರವಸೆಗೆ ಮಣಿಯಬೇಕೇ ಅನ್ನುವ ಕುರಿತು ಗೊಂದಲದಲ್ಲಿದ್ದಾರೆ. ಈ ನಡುವಲ್ಲೇ ಕಾಂಗ್ರೆಸ್ ಹೋರಾಟಕ್ಕೆ ಸಾಥ್ ಕೊಡುವ ಪ್ಲ್ಯಾನ್ ನಲ್ಲಿದೆ.

ಡಾ.ನಾಗೇಂದ್ರ ಸಾವಿನ ಪ್ರಕರಣ ರಾಜ್ಯ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ದ ಎಫ್ ಐಆರ್ ದಾಖಲಾಗಿದ್ದರೂ ಕೂಡ ವೈದ್ಯರು ಮಾತ್ರ ತಮ್ಮ ಪಟ್ಟನ್ನು ಸಡಿಲಿಸಿಲ್ಲ. ವೈದ್ಯರು ಮೈಸೂರು ಜಿಲ್ಲೆಯಲ್ಲಿ ಕೆಲಸವನ್ನು ಸ್ಥಗಿತಗೊಳಿಸಿದ್ದು, ರಾಜ್ಯದಾದ್ಯಂತ ಹೋರಾಟ ನಡೆಸಲು ಮುಂದಾಗಿದ್ದಾರೆ. ಆದರೆ ದುಖಃದಲ್ಲಿರುವ ಡಾ.ನಾಗೇಂದ್ರ ಅವರ ಕುಟುಂಬಸ್ಥರು ಹೋರಾಟ, ಪ್ರತಿಭಟನೆ, ಮುಷ್ಕರದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲೀಗ ವೈದ್ಯರು ಗೊಂದಲಕ್ಕೆ ಸಿಲುಕಿದ್ದು, ಪ್ರತಿಭಟನೆ ನಡೆಸಬೇಕಾ ಅಥವಾ ಬೇಡವೇ ಅನ್ನುವ ಕುರಿತು ಇಂದು ಇಂಡಿಯನ್ ಮೆಡಿಕಲ್ ಅಸೊಶಿಯೇಶನ್ ಸಭೆ ನಡೆಯಲಿದ್ದು, ಸಭೆಯಲ್ಲಿ ಈ ಕುರಿತು ನಿರ್ಧಾರವಾಗಲಿದೆ.

ಇನ್ನೊಂದೆಡೆ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಪ್ರಮುಖವಾಗಿ ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಂಡಿರುವ ಸಂಘದ ಅಧ್ಯಕ್ಷ ಡಾ.ರವೀಂದ್ರ ಅವರ ವಿರುದ್ದವೇ ಆರೋಪ ಕೇಳಿಬಂದಿದೆ. ಡಾ.ರವೀಂದ್ರ ಕಾಂಗ್ರೆಸ್ ಪಕ್ಷದ ಜೊತೆಗೆ ತಮ್ಮನ್ನು ತೊಡಗಿಸಿಕೊಂಡಿದ್ದು, ಕಾಂಗ್ರೆಸ್ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆನ್ನಲಾಗುತ್ತಿದೆ. ಇನ್ನೊಂದೆಡೆ ಗಣಪತಿ ಸಾವಿನ ಬೆನ್ನಲ್ಲೇ ನಡೆದ ದೊಡ್ಡ ಮಟ್ಟದ ಪ್ರತಿಭಟನೆಯ ರೀತಿಯಲ್ಲಿಯೂ ನಾಗೇಂದ್ರ ಸಾವಿನ ಕುರಿತು ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ಚಿಂತನೆಯನ್ನು ನಡೆಸುತ್ತಿದೆ.

ಡಾ.ನಾಗೇಂದ್ರ ಸಾವಿನ ಪ್ರಕರಣದ ಕುರಿತು ವೈದ್ಯರು ಕರೆ ನೀಡಿರುವ ರಾಜ್ಯದಾದ್ಯಂತ ಹೋರಾಟದ ಕುರಿತು ಇಂದು ನಡೆಯುವ ಸಭೆಯಲ್ಲಿ ನಿರ್ಧಾರವಾಗಲಿದೆ.