EXCLUSIVE STORY : ವಂಶಪಾರಂಪರ್ಯ ನಾಯಕತ್ವ ಕೈಬಿಡಿ : ಸೋನಿಯಾಗೆ 20 ಕಾಂಗ್ರೆಸ್ ನಾಯಕರ ಪತ್ರ

0

ನವದೆಹಲಿ : ಕಾಂಗ್ರೆಸ್ ಪಕ್ಷದಲ್ಲೀಗ ನಾಯಕತ್ವ ಬದಲಾವಣೆಯ ಕೂಗು ಬಲವಾಗಿ ಕೇಳಿಬರುತ್ತಿದೆ. ವಂಶಪಾರಂಪರ್ಯ ನಾಯಕತ್ವಕ್ಕೆ ತಿಲಾಂಜಲಿ ಇಟ್ಟು ಸಮರ್ಥ ನಾಯಕರನ್ನ ನೇಮಕ ಮಾಡುವಂತೆ ಕಾಂಗ್ರೆಸ್ ಪಕ್ಷದ ಹಿರಿಯ 20 ನಾಯಕರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ಸಿಡಬ್ಸ್ಯುಸಿ ಸಭೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆಯೇ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕಾರವನ್ನು ವಹಿಸಿಕೊಂಡಿದ್ದರು. ಆದರೆ ಸೋನಿಯಾಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ನಂತರವೂ ಕಾಂಗ್ರೆಸ್ ಪಕ್ಷ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ.

ಕಾಂಗ್ರೆಸ್ ಪಕ್ಷ ದೇಶದಲ್ಲಿ ದಿನೇ ದಿನೇ ಕಳೆಗುಂದುತ್ತಿರುವುದಕ್ಕೆ ವಂಶಪಾರಂಪರ್ಯ ರಾಜಕಾರಣವೇ ಮುಖ್ಯ ಕಾರಣ ಅನ್ನೋದನ್ನು ಸ್ವತಃ ಕಾಂಗ್ರೆಸ್ ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ. ಮಾಜಿ ಪ್ರಧಾನಿ ಜವಹರ್ ಲಾಲಾ ನೆಹರೂ, ಇಂದಿರಾಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ. ಹೀಗೆ ನೆಹರೂ ವಂಶಸ್ಥರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾಧಿಯೇರಿದ್ದಾರೆ. ಸೋನಿಯಾ ಗಾಂಧಿ ಅವರ ಅಧಿಕಾರದ ಅವಧಿಯವರೆಗೂ ಕಾಂಗ್ರೆಸ್ ಪಕ್ಷ ಚೆನ್ನಾಗಿಯೇ ಇತ್ತು. ಆದರೆ ಮೋದಿ ವರ್ಚಸ್ಸು ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಾಗಿತ್ತು.

ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಗಿಮಿಕ್ ಮಾಡೋದಕ್ಕೆ ಸಾಧ್ಯವಾಗಿಲ್ಲ. ಅಷ್ಟೇ ಯಾಕೆ ಅಧಿಕಾರದಲ್ಲಿದ್ದ ಅದೆಷ್ಟೋ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಹೀನಾಯವಾಗಿ ಕಾಂಗ್ರೆಸ್ ಸೋಲನ್ನ ಕಂಡಿದೆ. ಜೊತೆಗೆ ವಂಶಪಾರಂಪರ್ಯ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆಯೆಂಬ ಹಣೆಪಟ್ಟಿ ಕಳಚದೇ ಹೋದ್ರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಹೀನಾಯ ಸ್ಥಿತಿ ಇಳಿಯೋದು ಖಚಿತ ಅನ್ನೋದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.

ಇನ್ನೊಂದೆಡೆ ಸೋನಿಯಾ ಗಾಂಧಿ ಅವರಿಗೆ ಈಗಾಗಲೇ 73 ವರ್ಷ ವಯಸ್ಸು ದಾಟಿದೆ. ವಯಸ್ಸಿನ ಕಾರಣದಿಂದಾಗಿಯೇ ಚುರುಕಿನಿಂದ ದೇಶ ಸುತ್ತಿ ಪಕ್ಷವನ್ನು ಸಂಘಟಿಸುವುದು ಕೂಡ ಸುಲಭದ ಮಾತಲ್ಲ. ಜೊತೆಗೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರೂ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಿಲ್ಲ.

ಇನ್ನು ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನಾಯಕತ್ವವಹಿಸಿಕೊಳ್ಳುವುದಕ್ಕೆ ರಾಬರ್ಟ್ ವಾದ್ರಾ ಅವರ ಅವ್ಯವಹಾರಗಳು ತೊಡಕಾಗುತ್ತಿದ್ದು, ವಿರೋಧ ಪಕ್ಷಗಳು ಇದನ್ನೇ ದಾಳವನ್ನಾಗಿಸಿಕೊಳ್ಳುವ ಸಾಧ್ಯತೆಯೂ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ನಾಯಕರು ವಂಶಪಾರಂಪರ್ಯ ನಾಯಕತ್ವವನ್ನು ವಿರೋಧಿಸುತ್ತಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದರು, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು, ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸುಮಾರು 20ಕ್ಕೂ ಅಧಿಕ ನಾಯಕರು ಇದೀಗ ಸೋನಿಯಾ ಗಾಂಧಿ ಅವರಿಗೆ ಪತ್ರವನ್ನು ಬರೆದಿದ್ದು, ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ. ಈ ನಡುವಲ್ಲೇ ಸಿಡಬ್ಲ್ಯುಸಿ ಸಭೆ ನಡೆಯಲಿದ್ದು, ಸಭೆಯಲ್ಲಿ ನಾಯಕತ್ವ ಬದಲಾವಣೆಯ ವಿಚಾರವೇ ಹೆಚ್ಚು ಚರ್ಚೆಯಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

ದೇಶದಾದ್ಯಂತ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷಕ್ಕೆ ಮರುಜೀವ ಕೊಡುವ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷ ಕೂಡ ಚಿಂತನೆಯನ್ನು ನಡೆಸುತ್ತಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ನಾಯಕನ ಹುಡುಕಾಟವನ್ನೂ ನಡೆಸುತ್ತಿದ್ದಾರೆ. ಈ ನಡುವಲ್ಲೇ ಕಾಂಗ್ರೆಸ್ ನಾಯಕತ್ವಕ್ಕೆ ಈಗಾಗಲೇ 5 ಮಂದಿಯ ಹೆಸರು ಕೇಳಿಬಂದಿದ್ದು, ನಾಳೆ ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನವಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಪತ್ರ ಇದೀಗ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲವನ್ನು ಮೂಡಿಸಿದೆ.

Leave A Reply

Your email address will not be published.