ತಮಿಳುನಾಡು : ಆತ ಅಪಘಾತದಲ್ಲಿ ಪವಾಡ ಸದೃಶವಾಗಿ ಬದುಕುಳಿದಿದ್ದ. ಆದರೆ ಆತ ಮಾಡಿಟ್ಟಿದ್ದ 3 ಕೋಟಿ ರೂಪಾಯಿ ವಿಮೆಯ ಹಣ ಪಡೆಯೋಕೆ ಪತ್ನಿಯೇ ಪತಿಯನ್ನು ಕೊಂದು ಮುಗಿಸಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರೋದು ತಮಿಳುನಾಡಿನಲ್ಲಿ.
ಈರೋಡ್ ನ ತಡುಪತಿಯ ರಂಗರಾಜು ಎಂಬಾತನೇ ಕೊಲೆಯಾದ ದುರ್ದೈವಿ. ವಿದ್ಯುತ್ ಮಗ್ಗದ ಘಟಕದ ಮಾಲೀಕನಾಗಿದ್ದ ರಂಗರಾಜು ಮಾರ್ಚ್ 15 ರಂದು ಅಪಘಾತಕ್ಕೆ ಸಿಲುಕಿದ್ದ. ತೀವ್ರವಾಗಿ ಗಾಯಗೊಂಡಿದ್ದ ರಂಗರಾಜುವನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲ ವಾರಗಳ ಆಸ್ಪತ್ರೆ ಬಳಿಕ ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ.
ಪತಿಯನ್ನು ಡಿಸ್ಚಾರ್ಜ್ ಮಾಡಿಸುವ ಸಲುವಾಗಿ ಆಸ್ಪತ್ರೆಗೆ ಬಂದಿದ್ದ, ರಂಗರಾಜು ಪತಿ ಜ್ಯೋತಿಮಣಿ ಹಾಗೂ ರಾಜ ಎಂಬವರು ಕಾರಿನಲ್ಲಿ ಮನೆಯ ಕಡೆಗೆ ಕರೆದೊಯ್ದಿದ್ದಾರೆ. ದುರದೃಷ್ಟವಶಾತ್ ರಂಗರಾಜು ಮನೆ ತಲುಪಲೇ ಇಲ್ಲ. ಮಾರ್ಗ ಮಧ್ಯದಲ್ಲಿಯೇ ರಂಗರಾಜುವನ್ನು ವಾಹನದಿಂದ ಕೆಳಗಿಸಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ. ನಂತರ ಪೊಲೀಸರ ಮುಂಭಾಗದಲ್ಲಿ ಅಪಘಾತದ ನಾಟಕವಾಡಿದ್ದಾರೆ.
ಅನುಮಾನಗೊಂಡ ಪೊಲೀಸರು ಜ್ಯೊತಿ ಮಣಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದಂತೆಯೇ ರಂಗರಾಜು ಕೊಲೆ ರಹಸ್ಯ ಬಯಲಾಗಿದೆ. ಅಲ್ಲದೇ ರಾಜ ಪೆಟ್ರೋಲ್ ಬಂಕ್ ಒಂದರಲ್ಲಿ ಕ್ಯಾನ್ ನಲ್ಲಿ ಪೆಟ್ರೋಲ್ ತುಂಬಿಸಿಕೊಂಡಿರುವುದು ಗೊತ್ತಾಗಿದೆ. ರಾಜಾನನ್ನು ಕರೆ ತಂದು ವಿಚಾರಣೆ ನಡೆಸುತ್ತಿದ್ದಂತೆಯೇ ಪೆರಮನಲ್ಲೂರಿನಲ್ಲಿ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.
ರಂಗರಾಜು 1.5 ಕೋಟಿ ಸಾಲ ಮಾಡಿಕೊಂಡಿದ್ದ. ಪದೇ ಪದೇ ಹಣಕ್ಕಾಗಿ ಜ್ಯೋತಿಯನ್ನು ಪೀಡಿಸುತ್ತಿದ್ದ. ರಂಗರಾಜು ಬರೋಬ್ಬರಿ 3.5 ಕೋಟಿಯ ವಿಮೆ ಮಾಡಿಸಿರೋದು ಜ್ಯೋತಿಗೆ ಗೊತ್ತಿತ್ತು. ಹೀಗಾಗಿ ರಾಜ ಜೊತೆ ಸೇರಿ ಕೊಲೆ ಮಾಡಲು ನಿರ್ಧರಿಸಿದ್ದಾಳೆ. ರಾಜಾನಿಗೆ ಕೊಲೆ ಮಾಡಲು 50 ಸಾವಿರ ಹಣ ಕೊಟ್ಟಿದ್ದು, ಕೆಲಸ ಮುಗಿದ ಮೇಲೆ ಮತ್ತೆ 1 ಲಕ್ಷ ನೀಡೋದಾಗಿ ಹೇಳಿದ್ದಳು. ಇದೀಗ ಪೊಲೀಸರು ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ.