ತಮಿಳುನಾಡಿನ ಚುನಾವಣೆ ಪ್ರಚಾರದಷ್ಟೇ ರಂಗೀನ್ ತಮಿಳುನಾಡಿನ ಚುನಾವಣೆ ಮತದಾನವೂ. ಹೌದು ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಗಳು ದೋಸೆ ಹಾಕಿ, ಬಟ್ಟೆ,ಪಾತ್ರೆ ತೊಳೆದು ಪ್ರಚಾರ ಮಾಡಿದ್ರೆ, ಮತದಾನದ ವೇಳೆ ಸ್ಟಾರ್ ಸೈಕಲ್ ಮೇಲೆ ಬರುವ ಮೂಲಕ ಗಮನ ಸೆಳೆದಿದ್ದಾರೆ.

ದೇಶದಲ್ಲಿ ಹಾಗೂ ತಮಿಳುನಾಡಿನಲ್ಲಿ ಪೆಟ್ರೋಲ್ ,ಡಿಸೇಲ್ ದರ ವಿಪರೀತ ಏರಿಕೆಯಾಗಿದೆ. ಇದನ್ನು ಖಂಡಿಸಿ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಸೈಕಲ್ ನಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿ ಗಮನ ಸೆಳೆದಿದ್ದಾರೆ. ಒಂದರ್ಥದಲ್ಲಿ ಬೆಲೆ ಏರಿಕೆಯ ವಿರುದ್ಧ ವಿಜಯ್ ಪ್ರತಿಭಟನೆ ನಡೆಸಿದ್ದಾರೆ ಎನ್ನಬಹುದು.

ಚೈನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ ನ್ಯಾಷನಲ್ ಫ್ರೀ ಸ್ಕೂಲ್ ನ ಮತಗಟ್ಟೆಯಲ್ಲಿ ದಳಪತಿ ವಿಜಯ್ ಮತದಾನಕ್ಕಾಗಿ ಆಗಮಿಸಿದ್ದರು. ಆದರೆ ಐಷಾರಾಮಿ ಕಾರಿನ ಬದಲು ವಿಜಯ್ ಸೈಕಲ್ ನಲ್ಲಿ ಆಗಮಿಸಿ ಬೆಲೆ ಏರಿಕೆಗೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವಿಜಯ್ ಸೈಕಲ್ ನಲ್ಲಿ ಮತಗಟ್ಟೆ ಬಳಿ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಪಿಗಾಗಿ ಮುಗಿಬಿದ್ದರು. ಸಾಕಷ್ಟು ಜನರೊಂದಿಗೆ ಸೆಲ್ಪಿ ತೆಗೆಸಿಕೊಂಡ ವಿಜಯ್ ಕೊನೆಯಲ್ಲಿ ಸೈಕಲ್ ನಲ್ಲಿ ಮುಂದೇ ಸಾಗಲು ಸಾಧ್ಯವಾಗದೇ ತಮ್ಮ ಭದ್ರತಾ ಸಿಬ್ಬಂದಿಯ ಬೈಕ್ ನಲ್ಲಿ ಮನೆಗೆ ಮರಳಿದರು.

ಬಳಿಕ ವಿಜಯ್ ಸೈಕಲ್ ನ್ನು ಸಿಬ್ಬಂದಿ ಮನೆಗೆ ಕೊಂಡೊಯ್ದಿದ್ದಾರೆ. ಇನ್ನು ವಿಜಯ್ ಜೊತೆ ಸೆಲ್ಪಿಗೆ ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇನ್ನು ವಿಜಯ್ ಸೈಕಲ್ ಸವಾರಿಯ ಪೋಟೋ-ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ವಿಜಯ್ ಬೆಲೆ ಏರಿಕೆ ಖಂಡಿಸಲು ಪ್ರತಿಭಟನೆ ಕೈಗೊಂಡಿದ್ದಾರೆ ಎಂದು ಮಾತನಾಡಿಕೊಳ್ತಿದ್ದಾರೆ.
ಇನ್ನು ಕೆಲವರು ಈ ಬಿಸಿಲಿನಲ್ಲಿ ವಿಜಯ್ ಸಾಹಸ ಮೆಚ್ಚಬೇಕು. ಮುಖಕ್ಕೆ ಮಾಸ್ಕ್ ಧರಿಸಿ ಬಿರುಬೇಸಿಗೆಯಲ್ಲಿ ಹೀಗೆ ರಸ್ತೆಯಲ್ಲಿ ಸೈಕಲ್ ಚಲಾಯಿಸಲು ಧೈರ್ಯಬೇಕು ಎಂದಿದ್ದಾರೆ.