ಉಡುಪಿ : ಕೊರೊನಾ ವೈರಸ್ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ರಾಜ್ಯ ಸರಕಾರ ಪ್ರತೀ ಭಾನುವಾರ ರಾಜ್ಯದಾದ್ಯಂತ ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ ಆದೇಶ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕರ್ಪ್ಯೂ ಮಾದರಿಯ ಲಾಕ್ ಡೌನ್ ಕಟ್ಟುನಿಟ್ಟಾಗಿ ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆದೇಶದ ಮೇರೆಗೆ ಉಡುಪಿ ಜಿಲ್ಲೆಯಲ್ಲಿ 36 ಗಂಟೆಗಳ ಕಾಲ ಸಂಪೂರ್ಣ ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ ನಡೆಯಲಿದೆ. ಹೀಗಾಗಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಾದ್ಯಂತ ತುರ್ತು ಅಗತ್ಯ ಸೇವೆಗಳಾಗಿರುವ ಮೆಡಿಕಲ್, ಹಾಲು ಹಾಗೂ ಪೇಪರ್ ಮಾರಾಟಕ್ಕೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ.

ಉಳಿದಂತೆ ತರಕಾರಿ, ಮಾಂಸ, ದಿನಸಿ ಸಾಮಗ್ರಿ ಸೇರಿದಂತೆ ಯಾವುದೇ ಅಗತ್ಯ ವಸ್ತುಗಳು ಕೂಡ ಲಭ್ಯವಾಗುವುದಿಲ್ಲ. ಯಾರೂ ಕೂಡ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವಂತಿಲ್ಲ. ಯಾರಾದ್ರೂ ನಿಯಮ ಮೀರಿದ್ರೆ ಪೊಲೀಸರ ಲಾಠಿ ಮಾತಾಡುತ್ತವೆ ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.