ಶಾಲಾರಂಭಕ್ಕೆ ಯುಕೆ ವೈರಸ್ ಕರಿನೆರಳು : ವಿದ್ಯಾಗಮ, ಶಾಲಾರಂಭ ಮುಂದೂಡಿಕೆ ಸಾಧ್ಯತೆ ..?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ತಗ್ಗುತ್ತಿದ್ದಂತೆಯೇ ಹೊಸ ವರ್ಷದಿಂದಲೇ ಶಾಲೆಗಳನ್ನು ಪುನರಾರಂಭಿಸಲು ರಾಜ್ಯ ಸರಕಾರ ಮುಂದಾಗಿತ್ತು. ಆದ್ರೀಗ ಯುಕೆ ವೈರಸ್ ಸೋಂಕು ಶಾಲಾರಂಭಕ್ಕೆ ತೊಡಕಾಗುವ ಸಾಧ್ಯತೆಯಿದ್ದು, ಶಾಲಾರಂಭದ ನಿರ್ಧಾರದ ಕುರಿತು ಪುನರ್ ಪರಿಶೀಲನೆಗೆ ರಾಜ್ಯ ಸರಕಾರ ಮುಂದಾಗಿದೆ.

ಜನವರಿ 1 ರಿಂದಲೇ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರಕಾರ ಮುಂದಾಗಿತ್ತು. ಅಲ್ಲದೇ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆಯನ್ನು ಪುನರಾರಂಭಿಸಲು ಆದೇಶ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವಲ್ಲೇ ಯುಕೆ ವೈರಸ್ ಸೋಂಕು ಶಾಲಾರಂಭಕ್ಕೆ ತೊಡಕಾಗುವಂತೆ ಮಾಡಿದೆ.

ಲಂಡನ್ ನಿಂದ ದೇಶಕ್ಕೆ ವಾಪಾಸಾಗಿರುವ 6 ಮಂದಿಯಲ್ಲಿ ಯುಕೆ ವೈರಸ್ ಸೋಂಕು ಪತ್ತೆಯಾಗಿದೆ. ಅಲ್ಲದೇ ಚೆನ್ನೈ ವ್ಯಕ್ತಿಗೂ ಸೋಂಕು ಇರುವುದು ಖಚಿತವಾಗಿರುವ ಬೆನ್ನಲ್ಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡಿದೆ. ಈಗಾಗಲೇ ಲಂಡನ್ ನಿಂದ ತವರಿಗೆ ಮರಳಿದವರ ಮೇಲೆ ನಿಗಾ ಇಡಲು ಸಿದ್ದತೆ ನಡೆಯುತ್ತಿದ್ರೆ, ಇನ್ನೊಂದೆಡೆ ನೈಟ್ ಕರ್ಪ್ಯೂ ಜಾರಿ ಮಾಡುವ ಕುರಿತು ಸರಕಾರ ಚಿಂತನೆ ನಡೆಸುತ್ತಿದೆ.

ದೇಶದಲ್ಲಿ ಕೊರೊನಾ ಯುಕೆ ವೈರಸ್ ಸೋಂಕು ಪತ್ತೆಯಾಗಿರೋ ಹೊತ್ತಲೇ ಶಾಲಾರಂಭವನ್ನು ಮಾಡಿದ್ರೆ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ. ಜೊತೆಗೆ ಶಾಲಾರಂಭಕ್ಕೆ ಇನ್ನು ಒಂದೇ ವಾರದ ಅವಧಿ ಇದೆ. ಆದಷ್ಟು ಶೀಘ್ರದಲ್ಲಿಯೇ ನಿರ್ಧಾರವನ್ನು ಕೈಗೊಳ್ಳಬೇಕಾಗಿ ರುವ ಹಿನ್ನೆಲೆಯಲ್ಲಿ. ತಜ್ಞರಿಂದ ವರದಿ ಕೇಳಿರುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.ಇಂದೇ ತಜ್ಞರು ವರದಿಯನ್ನು ನೀಡಲಿದ್ದು, ವರದಿ ಬಂದ ನಂತರದಲ್ಲಿ ಶಾಲೆ, ಕಾಲೇಜುಗಳನ್ನು ಆರಂಭಿಸಬೇಕೆ, ಇಲ್ಲಾ ಬೇಡವೇ ಅನ್ನೋ ಕುರಿತು ಮುಖ್ಯ ಮಂತ್ರಿಗಳ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕ್ರಿಸ್ ಮಸ್, ಹೊಸ ವರ್ಷಾಚರಣೆಯ ನಡುವಲ್ಲೇ ಶಾಲಾರಂಭಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಯುಕೆ ವೈರಸ್ ಸೋಂಕು ಕೊರೊನಾಗಿಂತಲೂ ವೇಗವಾಗಿ ಹರಡುವುದರಿಂದ ಹೆಚ್ಚು ಅಪಾಯಕಾರಿ ಅನ್ನೋದನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸಾಲದಕ್ಕೆ ಕೇಂದ್ರ ಸರಕಾರ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ಸೋಂಕು ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲಾರಂಭದ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Comments are closed.