ಡೆಹರಾಡೂನ್: ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ 19 ರಹರೆಯದ ಸೃಷ್ಟಿ ಗೋಸ್ವಾಮಿ ಆಯ್ಕೆಯಾಗಿದ್ದು ನಾಳೆ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅರೇ ಇದೇನು ಚುನಾವಣೆಯೇ ಇಲ್ಲದೇ ಹೊಸ ಸರ್ಕಾರ ರಚನೆ ಆಗ್ತಿದ್ಯಾ? ಅಂತ ಕೇಳ್ತಿದ್ದೀರಾ…? ಸೃಷ್ಟಿ ಮುಖ್ಯಮಂತ್ರಿ ಪಟ್ಟಕ್ಕೇರುತ್ತಿರೋದು ಕೇವಲ ಒಂದು ದಿನದ ಮಟ್ಟಿಗೆ.

ಹೆಣ್ಣು ಮಕ್ಕಳ ರಾಷ್ಟ್ರೀಯ ದಿನಾಚರಣೆ ಆಚರಿಸಲ್ಪಡುವ ಜನವರಿ 24 ರಂದು ಹರಿದ್ವಾರ ಮೂಲದ 19 ವರ್ಷದ ಸೃಷ್ಟಿ ಒಂದು ದಿನದ ಮಟ್ಟಿಗೆ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಉತ್ತರಾಖಂಡದ ಬೇಸಿಗೆ ರಾಜಧಾನಿ ಗೈರಸನ್ ನಾಳೆ ಅಧಿಕಾರ ನಡೆಸಲಿರುವ ಸೃಷ್ಟಿ ರಾಜ್ಯದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಅಟಲ್ ಆಯುಷ್ಮಾನ್ ಯೋಜನೆ ಜಾರಿ, ಪ್ರವಾಸೋದ್ಯಮ, ಹೋಂಸ್ಟೇ ಉದ್ಯಮ ಸೇರಿದಂತೆ ಹಲವು ಯೋಜನೆಗಳ ಜಾರಿಯ ಕುರಿತು ಮಾಹಿತಿ ಪಡೆಯಲಿದ್ದಾರೆ.

19 ವರ್ಷದ ಸೃಷ್ಟಿ ಮೂರನೇ ಬಿಎಸ್ಸಿ ಅಧ್ಯಯನ ಮಾಡುತ್ತಿದ್ದು, ತನಗೆ ಸಿಕ್ಕಿರುವ ಅವಕಾಶದ ಬಗ್ಗೆ ಅತಿ ಉತ್ಸುಕರಾಗಿದ್ದಾರೆ. ಇದು ನಿಜವೇ ಎಂಬುದನ್ನೇ ನನಗೆ ನಂಬಲಾಗುತ್ತಿಲ್ಲ. ರಾಜಕೀಯದಲ್ಲಿ ಯುವಜನತೆ ಕೂಡ ಮಾದರಿ ಕಾರ್ಯ ಮಾಡಬಹುದು ಎಂಬುದನ್ನು ಸಾಬೀತುಪಡಿಸಲು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಸೃಷ್ಟಿ ಈಗಾಗಲೇ ಮಕ್ಕಳ ವಿಧಾನಸಭೆಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಕೆಲಸ ಆರಂಭಿಸುವ ಮುನ್ನ ಅಧಿಕಾರಿಗಳು ಅವರಿಗೆ ಸೂಕ್ತ ಮಾಹಿತಿ ನೀಡುತ್ತಾರೆ.

ಮಕ್ಕಳ ಹಕ್ಕುಗಳನ್ನು ಉತ್ತೇಜಿಸುವುದು, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹೆಣ್ಣುಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಿ ಇಂತಹ ಪ್ರಯತ್ನಗಳು ಉತ್ತರಾಖಂಡದಲ್ಲಿ ಹೆಚ್ಚಿದ್ದು, ಗೈರಸನ್ ನಲ್ಲಿ ಈಗಾಗಲೇ ನೂತನ ಮುಖ್ಯಮಂತ್ರಿ ಸ್ವಾಗತಕ್ಕೆ ಸಿದ್ಧತೆ ನಡೆದಿದೆ.