ಮಾಜಿ ಸಚಿವ ವಿನಯ ಕುಲಕರ್ಣಿ, ಸಹೋದರ ವಿಜಯ್ ಅರೆಸ್ಟ್

ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಸಹೋದರ ವಿಜಯ್ ಕುಲಕರ್ಣಿಯನ್ನು ಬಂಧಿಸಿದ್ದಾರೆ.

2017 ಜೂನ್ 15ರಂದು ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡನ ಹತ್ಯೆ ನಡೆದಿತ್ತು. ಅಂದು ಬೆಳಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‍ಗೆ ಎಂಟ್ರಿ ಕೊಟ್ಟಿದ್ದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ದೃಶ್ಯಗಳನ್ನಾಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿದ್ದ ಐವರನ್ನು ಬಂಧಿಸಿದ್ದರು. ಹೀಗಾಗಿ ಕೊಲೆಯ ಹಿಂದೆ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.

ಅಲ್ಲದೇ ವಿನಯ್ ಕುಲಕರ್ಣಿ ಬೆಂಬಲಿಗರು ಯೋಗೀಶ್ ಗೌಡ ಸಹೋದರನ ಜೊತೆಗೆ ರಾಜಿಗೆ ಮುಂದಾಗಿದ್ದರು. ಆದರೆ ಯೋಗೀಶ್ ಗೌಡ ತಾಯಿ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿತ್ತು. ರಾಜ್ಯ ಸರ್ಕಾರ ಯೋಗೇಶ್ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ಬಸವರಾಜ ಶಿವಪ್ಪ, ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ ಕಾಟಗಿ ಹಾಗೂ ಮಹಾಬಲೇಶ್ವರ ಹೊನಗಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇಂದು ವಿನಯ್ ಕುಲಕರ್ಣಿ ನಿವಾಸದ ಮೇಲೆ ದಾಳಿ ನಡೆಸಿ, ಕುಲಕರ್ಣಿಯನ್ನು ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಯನ್ನು ನಡೆಸುತ್ತಿದ್ದಾರೆ.

Comments are closed.