Reliance Industries : ರಿಲಯನ್ಸ್‌ ಇಂಡಸ್ಟ್ರೀಸ್‌ ನಿರ್ದೇಶಕರಾಗಿ ಕುಂದಾಪುರದ ಕೆವಿ ಕಾಮತ್‌ ನೇಮಕ

ಮುಂಬೈ : ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (Reliance Industries) ಸ್ವತಂತ್ರ ನಿರ್ದೇಶಕರಾಗಿ ಕುಂದಾಪುರ ಮೂಲದ ಕನ್ನಡಿಗರಾದ ಕೆ.ವಿ. ಕಾಮತ್‌ ಅವರನ್ನು ನೇಮಕ ಮಾಡಲಾಗಿದೆ. 74 ವರ್ಷದ ಕುಂದಾಪುರ ವಾಮನ ಕಾಮತ್‌ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಇವರು ಐದು ವರ್ಷಗಳ ಅವಧಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ಹಹಿಸಲಿದ್ದಾರೆ.


ಕುಂದಾಪುರ ವಾಮನ ಕಾಮತರು 1947 ಡಿಸೆಂಬರ್‌ 2ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಪಿಯುಸಿ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಪಡೆದುಕೊಳ್ಳುತ್ತಾರೆ. 1969ರಲ್ಲಿ ಸುರತ್ಕಲ್‌ ರಾಷ್ಟೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕದಲ್ಲಿ ಮೆಕಾನಿಕಲ್‌ ಇಂಜಿನಿಯರಿಂಗ್‌ ಪದವಿಯನ್ನು ಪಡೆದರು. ಮುಂದೆ ಭಾರತೀಯ ವ್ಯವಸ್ಥಾಪನಾ ಸಂಸ್ಥೆಯಾದ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಮೆನೇಜ್ಮೆಂಟ್‌ ಅಹ್ಮದಾಬಾದ್‌ನಲ್ಲಿ ವ್ಯವಸ್ಥಾಪನಾ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮವನ್ನು ಪಡೆದುಕೊಳ್ಳುತ್ತಾರೆ.


ತಮ್ಮ ಶಿಕ್ಷಣದ ನಂತರ 1971ರಲ್ಲಿ ಐಸಿಐಸಿಐ ಬ್ಯಾಂಕ್‌ನ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ. 1988ರಲ್ಲಿ ಕೆ.ವಿ ಕಾಮತ್‌ ಏಷ್ಯನ್‌ ಡೆವಲಪ್ಮೆಂಟ್‌ ಬ್ಯಾಂಕ್‌ಗೆ ಸೇರಿಕೊಂಡು, ಚೀನಾ, ಭಾರತ, ಬಾಂಗ್ಲಾದೇಶ, ಇಂಡೋನೇಷ್ಯಾ, ವಿಯೆಟ್ನಾಂ ದೇಶಗಳಲ್ಲಿ ಹಲವಾರು ಯೋಜನೆಗಳಲ್ಲಿ ಕೆಲಸಮಾಡಿ ಅಪಾರ ಅನುಭವವನ್ನು ಪಡೆದುಕೊಂಡಿರುತ್ತಾರೆ. ಮತ್ತೆ ಕಾಮತರು 1996 ಮೇನಲ್ಲಿ ಐಸಿಐಸಿಐಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಾಧಿಕಾರಿಯಾಗಿ ಮರಳಿದರು. ಇವರು ಹಲವಾರು ಗ್ರಾಹಕ ಸ್ನೇಹಿ ಕ್ರಮಗಳಿಂದ ಐಸಿಐಸಿಐ ಗುಂಪಿನ ಸೇವಾ ವಿಸ್ತರಣೆ ಮತ್ತು ಹಲವಾರು ವಿತ್ತೀಯ ಸಂಸ್ಥೆಗಳ ವಿಲಯನದಿಂದ ಒಟ್ಟಾರೆ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರದೊಂದಿಗೆ ಐಸಿಐಸಿಐ ಬ್ಯಾಂಕ್‌ನ ಸ್ಥಾಪನೆಗೆ ಕಾರಣರಾಗುತ್ತಾರೆ.


2011 ಮೇ 1ರಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿಯಾದ ಇನ್ಫೋಸಿಸ್‌ನ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. 2015 ರಲ್ಲಿ ಕಾಮತರು ಬ್ರಿಕ್ಸ್‌ ದೇಶಗಳು ಸ್ಥಾಪಿಸಿದ ಹೊಸ ಅಭಿವೃದ್ಧಿ ಬ್ಯಾಂಕ್‌ನ ಮೊದಲ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. ನಂತರ 2020ರಲ್ಲಿ ಈ ಅಧ್ಯಕ್ಷ ಸ್ಥಾನದಲ್ಲಿ ನಿವೃತ್ತರಾಗುತ್ತಾರೆ. ಪ್ರಸ್ತುತ ವಾಮನ ಕಾಮತರು ನ್ಯಾಷನಲ್‌ ಬ್ಯಾಂಕ್‌ ಫಾರ್‌ ಫೈನಾನ್ಸಿಂಗ್‌ ಇನ್ಪ್ರಾಸ್ಟ್ರಕ್ಚರ್‌ ಆ್ಯಂಡ್‌ ಡೆವಲಪ್‌ಮೆಂಟ್‌ನ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ : Digital Currency: ಭಾರತದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಯಾದ ಡಿಜಿಟಲ್‌ ರೂಪಾಯಿ; ಇದರಿಂದಾಗುವ ಲಾಭವೇನು…

ಇದನ್ನೂ ಓದಿ : Realme 10 4G : ಸದ್ಯದಲ್ಲೇ ಬಿಡುಗಡೆಯಾಗಲಿದೆ ರಿಯಲ್‌ಮಿ 10 4G ಫೋನ್‌; ಒಂದೇ ಸಮಯದಲ್ಲಿ 18 ಅಪ್ಲಿಕೇಶನ್‌ ರನ್‌ ಮಾಡಬಹುದಂತೆ…


ಶುಕ್ರವಾರ ರಿಲಯನ್ಸ್‌ ಇಂಡಸ್ಟ್ರೀಸ್‌ ನಿರ್ದೇಶಕರ ಮಂಡಳಿಯು ನಡೆಸಿದ ಸಭೆಯಲ್ಲಿ ಮಾನವ ಸಂಪನ್ಮೂಲ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಕುಂದಾಪುರ ವಾಮನ ಕಾಮತ್‌ ಅವರನ್ನು ರಿಲಯನ್ಸ್‌ ಕಂಪನಿಯ ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡಲು ಷೇರುದಾರರಿಗೆ ಶಿಫಾರಸು ಮಾಡಿದ್ದಾರೆ. ಕಾಮತರನ್ನು ರಿಲಯನ್ಸ್‌ ಸ್ಟ್ರಾಟಜಿಕ್‌ ಇನ್ವೆಸ್ಟ್‌ಮೆಂಟ್‌ ಲಿಮಿಟೆಡ್‌ನ ಸ್ವತಂತ್ರ ನಿರ್ದೇಶಕರನ್ನಾಗಿ ಹಾಗೂ ನಾನ್‌ ಎಕ್ಸಿಕ್ಯೂಟಿವ್‌ ಚೇರ್ಮನ್‌ ಆಗಿ ಸಹ ನೇಮಕ ಮಾಡಲಾಗಿದೆ.

KV Kamath of Kundapur appointed as Reliance Industries Director

Comments are closed.