ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಸಂಕಷ್ಟ! ಗ್ಯಾಸ್ ಸಿಲಿಂಡರ್ ಡೆಲಿವರಿ ವಿಳಂಬ
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಿದರೂ ಡೆಲಿವರಿ ವಿಳಂಬವಾಗುತ್ತಿದೆ. ಹಲವು ಕಡೆ ಗ್ರಾಹಕರು 10 ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಶದ ಹಲವು ಭಾಗಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವಿಳಂಬ ಉಂಟಾಗುತ್ತಿರುವುದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಲಿಂಡರ್ ಬುಕ್ ಮಾಡಿದ ಬಳಿಕ ನಿಗದಿತ ಸಮಯಕ್ಕೆ ಡೆಲಿವರಿ ಸಿಗದೇ ಹಲವರು ದಿನಗಟ್ಟಲೆ ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಗ್ಯಾಸ್ ಕಂಪನಿಗಳು ಮೊದಲಿಗೆ ಒಂದು ವಾರದೊಳಗೆ ಸಿಲಿಂಡರ್ ತಲುಪುತ್ತದೆ ಎಂದು ಸಂದೇಶ ಕಳುಹಿಸುತ್ತಿದ್ದರೂ, ಬಳಿಕ ಮತ್ತೆ ಡೆಲಿವರಿ ತಡವಾಗುತ್ತದೆ ಎಂದು ಮತ್ತೊಂದು ಎಸ್‌ಎಂಎಸ್ ಕಳುಹಿಸುತ್ತಿರುವ ಘಟನೆಗಳು ಹೆಚ್ಚಾಗಿವೆ. ಕೆಲವು ಪ್ರದೇಶಗಳಲ್ಲಿ ಸಿಲಿಂಡರ್ ತಲುಪಲು 10 ದಿನಗಳವರೆಗೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ನಿಯಮಗಳಿಂದ ಮತ್ತಷ್ಟು ಗೊಂದಲ
ಕೇಂದ್ರ ಸರ್ಕಾರ ಈಗಾಗಲೇ ಗ್ಯಾಸ್ ಬುಕ್ಕಿಂಗ್‌ಗೆ ನಿರೀಕ್ಷಾ ಅವಧಿ ನಿಯಮ ಜಾರಿಗೆ ತಂದಿದೆ. ನಗರ ಪ್ರದೇಶಗಳಲ್ಲಿ ಒಂದು ಸಿಲಿಂಡರ್ ಬುಕ್ ಮಾಡಿದ ಬಳಿಕ ಮತ್ತೊಂದು ಬುಕ್ಕಿಂಗ್ ಮಾಡಲು 25 ದಿನಗಳ ಗ್ಯಾಪ್ ಇರಬೇಕು. ಗ್ರಾಮೀಣ ಭಾಗಗಳಲ್ಲಿ ಈ ಅವಧಿ 45 ದಿನಗಳವರೆಗೆ ನಿಗದಿಪಡಿಸಲಾಗಿದೆ.
ಈ ನಿಯಮಗಳಿಂದ ಕುಟುಂಬಗಳು ಹೆಚ್ಚುವರಿ ತೊಂದರೆ ಅನುಭವಿಸುತ್ತಿವೆ ಎನ್ನಲಾಗುತ್ತಿದೆ. ವಿಶೇಷವಾಗಿ ದೊಡ್ಡ ಕುಟುಂಬಗಳು ಮತ್ತು ಹೋಟೆಲ್‌ಗಳಿಗೆ ಅವಲಂಬಿತ ಸಣ್ಣ ವ್ಯಾಪಾರಿಗಳಿಗೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಗ್ಯಾಸ್ ಬೆಲೆ ಎಷ್ಟು?
ಪ್ರಸ್ತುತ ಗೃಹ ಬಳಕೆಯ LPG ಸಿಲಿಂಡರ್ ಬೆಲೆ ಸುಮಾರು ₹965ರಷ್ಟಿದೆ. ಡೆಲಿವರಿ ಶುಲ್ಕ ಸೇರಿಸಿದರೆ ಗ್ರಾಹಕರು ಸುಮಾರು ₹1000ವರೆಗೆ ಪಾವತಿಸಬೇಕಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಬೆಲೆ ಏರಿಕೆ ಮತ್ತು ಪೂರೈಕೆ ಸಮಸ್ಯೆ ಎರಡೂ ಜನರಲ್ಲಿ ಆತಂಕ ಹೆಚ್ಚಿಸಿವೆ.
ಇನ್ನು ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್ ಸಿಲಿಂಡರ್ ದರದಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಬೆಲೆ ಏರಿಕೆಯಿಂದ ಹೋಟೆಲ್, ಟೀ ಅಂಗಡಿ ಮತ್ತು ಸಣ್ಣ ವ್ಯಾಪಾರಿಗಳ ವೆಚ್ಚ ಹೆಚ್ಚಾಗಿದೆ.
ಸರಬರಾಜಿನ ಮೇಲೂ ಪರಿಣಾಮ
ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಧನ ಸರಬರಾಜಿನ ಅಸ್ಥಿರತೆ ಹಾಗೂ ಹರ್ಮುಜ್ ಜಲಸಂಧಿ ಪ್ರದೇಶದ ಉದ್ವಿಗ್ನ ಪರಿಸ್ಥಿತಿ ಗ್ಯಾಸ್ ಪೂರೈಕೆಯ ಮೇಲೂ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿ ತಿಂಗಳ ಮೊದಲ ದಿನ ತೈಲ ಕಂಪನಿಗಳು ಹೊಸ ದರ ಪ್ರಕಟಿಸುತ್ತಿರುವುದರಿಂದ ಮುಂದಿನ ತಿಂಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುತ್ತದೆಯೇ ಎಂಬ ಚರ್ಚೆ ಕೂಡ ಜೋರಾಗಿದೆ. ಗ್ರಾಹಕರು ಈಗ ಬೆಲೆ ಇಳಿಕೆಗೆ ಕಾಯುತ್ತಿದ್ದಾರೆ.



