ಆದಾಯ ತೆರಿಗೆದಾರರೇ ಹುಷಾರ್ ..! ಯಾವುದೇ ಕಾರಣಕ್ಕೂ ಈ ಲಿಂಕ್ ಕ್ಲಿಕ್ ಮಾಡಲೇ ಬೇಡಿ ..!

ನವದೆಹಲಿ : ಪ್ರಸಕ್ತ ವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಡಿಸೆಂಬರ್ 31 ಕೊನೆಯ ದಿನವಾಗಿದೆ. ಸೈಬರ್‌ ಖದೀಮರು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳಲು ಕಾದು ಕುಳಿತಿದ್ದಾರೆ. ತೆರಿಗೆದಾರರು ಕೊಂಚ ಯಾಮಾರಿದ್ರೂ ವಂಚನೆ ನಡೆಯುತ್ತೆ ಅಂತಾ ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.

ಆದಾಯ ತೆರಿಗೆಯ ರೀಫಂಡ್‌ ನೀಡುವುದಾಗಿ ನಕಲಿ ಸಂದೇಶಗಳ(ಎಸ್‌ಎಂಎಸ್‌/ಇಮೇಲ್‌) ಮೂಲಕ ವಂಚಿಸುವ ಪ್ರಯತ್ನಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ಐಟಿ ರೀಫಂಡ್‌ ಮಾಡುವುದಾಗಿ ಇಮೇಲ್‌ / ಲಿಂಕ್‌ಗಳನ್ನು ಕಳಿಸಿ ಯಾಮಾರಿಸುತ್ತಿದ್ದಾರೆ. ನಕಲಿ ಈ ಮೇಲ್ ಲಿಂಕ್ ಮೂಲಕ ವ್ಯಕ್ತಿಯ ಬ್ಯಾಂಕ್‌ ದಾಖಲೆಗಳನ್ನು ಕದಿಯುವ ಸಾಧ್ಯತೆಗಳಿವೆ. ಐಟಿ ರೀಫಂಡ್‌ ಮಾಡುವುದಾಗಿ ಹೇಳುವ ಯಾವುದೇ ಸಂದೇಶಗಳಿಗೆ ತೆರಿಗೆದಾರರು ಪ್ರತಿಕ್ರಿಯಿಸಬಾರದು ಎಂದು ತೆರಿಗೆ ಇಲಾಖೆ ಎಚ್ಚರಿಸಿದೆ.

ಆದಾಯ ತೆರಿಗೆ, ಐಟಿ ರೀಫಂಡ್ ಸೇರಿದಂತೆ ಯಾವುದೇ ವ್ಯವಹಾರವನ್ನ ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ ಖಾತೆಗೆ ಲಾಗಿನ್‌ ಆಗಿಯೇ ಮಾಡಬೇಕು. ತಮಗೆ ಬರುವ ಯಾವುದೇ ಇಮೇಲ್‌ಗಳಿಗೆ ಬರುವ ಸಂದೇಶಗಳಿಗೆ ಉತ್ತರಿಸುವ ಅಥವಾ ಅಲ್ಲಿ ನೀಡುವ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸಬೇಕು.
ಆದಾಯ ತೆರಿಗೆ ಇಲಾಖೆಯನ್ನೇ ಹೋಲುವ ನಕಲಿ ಜಾಲತಾಣಗಳು ಅಥವಾ ಇಮೇಲ್‌ಗಳ ಮೂಲಕ ವಂಚನೆ ಮಾಡಲಾಗುತ್ತಿದೆ.

ಯಾವುದೇ ಕಾರಣಕ್ಕೂ ಆದಾಯ ತೆರಿಗೆ ಇಲಾಖೆಯ ಈ ಮೇಲ್ ಮೂಲಕ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಕೇಳುವುದಿಲ್ಲ. ಅಲ್ಲದೇ ತಪ್ಪಿಯೂ ಎಟಿಎಂ ಪಿನ್ ನಂಬರ್, ಪಾಸವರ್ಡ್, ಕ್ರೆಡಿಟ್ ಕಾರ್ಡ್ ವಿವರ ಸೇರಿದಂತೆ ಬ್ಯಾಂಕಿನ ಯಾವುದೇ ದಾಖಲೆಗಳನ್ನು ಈ ಮೇಲ್ ಮೂಲಕ ಸಲ್ಲಿಸಲು ಕೇಳುವುದೇ ಇಲ್ಲ. ಹೀಗಾಗಿ ಅಂತಹ ಯಾವುದೇ ಈ ಮೇಲ್ ಗಳು ಬಂದಲ್ಲಿ, ತಮ್ಮ ವೈಯಕ್ತಿಕ ವಿವರಗಳನ್ನು ನೀಡುವ ಮುನ್ನ ಆದಾಯ ತೆರಿಗೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

ವಂಚಕರು ಕಳುಹಿಸುವ ಲಿಂಕ್ ಕ್ಲಿಕ್ ಮಾಡಿದ್ರೆ ಆ ಮೂಲಕ ನಿಮ್ಮ ಕಂಪ್ಯೂಟರ್ ನಲ್ಲಿರುವ ಗೌಪ್ಯ ಮಾಹಿತಿಯನ್ನು ಕದಿಯುವ ಸಾಧ್ಯತೆಯಿದೆ. ಹೀಗಾಗಿ ಆ್ಯಂಟಿ-ವೈರಸ್‌ ಸಾಫ್ಟ್‌ವೇರ್‌, ಆ್ಯಂಟಿ ಸ್ಪೈವೇರ್‌ ಮತ್ತು ಫೈರ್‌ವಾಲ್‌ಗಳನ್ನು ಬಳಸಿ. ಕಾಲಕಾಲಕ್ಕೆ ಅಪ್‌ಡೇಟ್‌ ಮಾಡುತ್ತಿರಿ ಎಂದು ಆದಾಯ ಇಲಾಖೆ ಹೇಳಿದೆ.

Comments are closed.