ಜೈಲಿನಿಂದ ಹೊರಬಂದ ಬಳಿಕ ಒಂದಷ್ಟು ಕಾಲ ದೇವರು, ದರ್ಗಾ ಅಂತ ಪೂಜೆಯಲ್ಲೇ ಕಾಲ ಕಳೆದ ತುಪ್ಪದ ಬೆಡಗಿ, ನಟಿ ರಾಗಿಣಿ ಮತ್ತೆ ತಮ್ಮ ಮೊದಲಿನ ಚಟುವಟಿಕೆಗೆ ಮರಳಿದ್ದು ವಿಕಲಚೇತನರ ಕ್ರಿಕೆಟ್ ಪಂದ್ಯದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಕ್ರಿಕೆಟ್ ಪಂದ್ಯಾವಳಿಯನ್ನು ಬೆಂಗಳೂರಿನಲ್ಲಿ ಅಯೋಜಿಸಲಾಗಿದ್ದು ಇದಕ್ಕೆ ರಾಗಿಣಿ ದ್ವಿವೇದಿ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ದೈಹಿಕ ವಿಕಲಚೇತನರ ಕ್ರಿಕೆಟ್ ಅಸೋಸಿಯೇಶನ್ ಈ T-10 ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದೆ. ಮಾರ್ಚ್ 11 ರಂದು ಆಯೋಜಿಸಲಾಗಿರುವ ಈ ಟೂರ್ನಿಯಲ್ಲಿ 28 ತಂಡಗಳು ಭಾಗಿಯಾಗಲಿವೆ.

ಈ ಕುರಿತು ಬೆಂಗಳೂರಿನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ರಾಗಿಣಿ, ಇದು ನನಗೆ ತುಂಬ ವಿಶೇಷವಾದ ಇವೆಂಟ್. ನಾನು ಕಳೆದ 6-7 ವರ್ಷದಿಂದ ಇವರಿಗೆ ಸಹಾಯ ಮಾಡ್ಕೊಂಡು ಬಂದಿದ್ದೇನೆ. ನಾನು ಇವರನ್ನು ವಿಕಲಚೇತನರು ಎಂದು ಕರೆಯಲು ಇಚ್ಛಿಸುವುದಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲ ಮೊದಲ ಬಾರಿಗೆ ಇಂತಹದೊಂದು ಟೂರ್ನಿ ಕರ್ನಾಟಕದಲ್ಲಿ ಆಯೋಜನೆಯಾಗಿದ್ದುನಾನು ಇದಕ್ಕೆ ಸಂಪೂರ್ಣ ಸಹಕಾರ ನೀಡ್ತಿನಿ ಎಂದಿದ್ದಾರೆ. ಈ ಹಿಂದೆಯೂ ಹಲವು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರಾಗಿಣಿ ಜೈಲಿನಿಂದ ಬೇಲ್ ಮೇಲೆ ಹೊರಬಂದ ಬಳಿಕ ಮತ್ತೆ ತಮ್ಮ ಹಳೆಯ ಬದುಕಿಗೆ ಮರಳಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಮೇಲಿನ ಕಪ್ಪುಚುಕ್ಕೆಯನ್ನು ಮರೆಸುವ ಪ್ರಯತ್ನದಲ್ಲಿದ್ದಾರೆ.