ತಮಿಳುನಾಡಿನ ಮಾಜಿಸಿಎಂ ದಿ.ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿರುವ ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಮತ್ತೊಂದು ಸಿನಿಮಾಕ್ಕೆ ಸಿದ್ಧವಾಗಿದ್ದಾರೆ. ಆಸ್ತಿಕರ ಆರಾಧ್ಯದೈವ ಪತಿವ್ರತೆ ಸೀತೆಯ ಪಾತ್ರದಲ್ಲಿ ಕಂಗನಾ ಕಂಗೊಳಿಸಲಿದ್ದಾರೆ.

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪತ್ನಿ ಸೀತೆಯ ಕಥಾಹಂದರ ಹೊಂದಿರುವ ದಿ ಇನ್ಕಾರ್ನೇಷನ್ ಸೀತಾ ಸಿನಿಮಾಗೆ ಕಂಗನಾ ಸಹಿ ಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಸಿಹಿಸುದ್ದಿಯನ್ನು ಅಭಿಮಾನಿಗಳೊಂದಿಗೆ ಕಂಗನಾ ಹಂಚಿಕೊಂಡಿದ್ದಾರೆ.
ಒಂದೊಳ್ಳೆ ಟೀಂ ಜೊತೆ ಸೀತಾ ಮಾತೆ ಪಾತ್ರವನ್ನು ನಿಭಾಯಿಸಲು ಸಿದ್ಧ ಎಂಬರ್ಥದಲ್ಲಿ ಕಂಗನಾ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಇನ್ನು ಸಿನಿಮಾ ಬಗ್ಗೆ ನಿರ್ದೇಶಕ ಅಲೌಖಿಕ್ ದೇಸಾಯಿ ಟ್ವೀಟ್ ಮಾಡಿದ್ದು, ಸೀತಾ ಆರಂಭ….ನಂಬಿಕೆಯಿಂದ ಶರಣಾದವರಿಗೆ ಬ್ರಹ್ಮಾಂಡವೇ ಸಹಾಯ ಮಾಡುತ್ತಿದೆ. ಇಷ್ಟು ಮರೀಚಿಕೆಯಾಗಿದ್ದು, ಈಗ ಸ್ಪಷ್ಟವಾಗಿದೆ. ಎಂದೂ ಅನ್ವೇಷಿಸದ ಧಾರ್ಮಿಕ ಪಾತ್ರ ಸೀತಾ. ಈ ಪಾತ್ರಕ್ಕೆ ಕಂಗನಾರನ್ನು ಕರೆತರಲು ಖುಷಿಯಾಗುತ್ತಿದೆ ಎಂದಿದ್ದಾರೆ.

ದಿ ಇನ್ ಕಾರ್ನೇಷನ್ ಸೀತಾ ಸಿನಿಮಾಗೆ ಕಂಗನಾರನ್ನು ಸ್ವಾಗತಿಸಲು ಖುಷಿಯಾಗುತ್ತಿದೆ ಎಂದು ನಿರ್ಮಾಪಕ ಸಲೋನಿ ಶರ್ಮಾ ಹೇಳಿದ್ದಾರೆ. ಬಾಹುಬಲಿ,ಮಗಧೀರ,ಭಜರಂಗಿ ಬಾಯಿಜಾನ್ ಸಿನಿಮಾಗಳಿಗೆ ಕತೆ ಬರೆದ ಕೆ.ವಿ.ವಿಜಯೇಂದ್ರ ಪ್ರಸಾದ್ ಸೀತಾಗೆ ಚಿತ್ರಕತೆ ಬರೆದಿದ್ದು, ಇವರೇ ಸೀತಾ ಪಾತ್ರಕ್ಕೆ ಕಂಗನಾರನ್ನು ಸೂಚಿಸಿದ್ದರಂತೆ.

ಈ ಹಿಂದೆ ಸೀತಾ ಪಾತ್ರಕ್ಕೆ ಕರೀನಾ ಕಪೂರ್ ಹೆಸರು ಕೇಳಿಬಂದಿತ್ತು. ಆದರೆ ಕರೀನಾ ಕಪೂರ್ ಈ ಸಿನಿಮಾಗಾಗಿ 12 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿತ್ತು. ಅಲ್ಲದೇ ಆಲಿಯಾ ಭಟ್ ಹೆಸರು ಕೂಡ ಚಾಲ್ತಿಯಲ್ಲಿತ್ತು. ಈಗ ಎಲ್ಲ ಚರ್ಚೆಗಳು ಅಂತ್ಯಗೊಂಡಿದ್ದು ಸೀತಾ ಪಾತ್ರಕ್ಕೆ ಕಂಗನಾ ಆಯ್ಕೆಯಾಗಿದ್ದಾರೆ.
ಸದ್ಯ ಕಂಗನಾ ಧಾಕಡ್ ಚಿತ್ರೀಕರಣ ಮುಗಿಸಿದ್ದು, ಇನ್ನೂ ತೇಜಸ್ ಸಿನಿಮಾದ ಶೂಟಿಂಗ್ ಬಾಕಿ ಇದೆ.
Kangana Ranaut announces new film The Incarnation Sita