ನವದೆಹಲಿ: Jacqueline: 200 ಕೋಟಿ ರೂ. ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಮಧ್ಯಂತರ ಜಾಮೀನನ್ನು ನವೆಂಬರ್ 10ರವರೆಗೆ ವಿಸ್ತರಿಸಿ ದೆಹಲಿ ಕೋರ್ಟ್ ಆದೇಶ ಹೊರಡಿಸಿದೆ. ಸಾಮಾನ್ಯ ಜಾಮೀನು ಮತ್ತು ಇತರೆ ಬಾಕಿ ಇರುವ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 10ಕ್ಕೆ ನಿಗದಿಪಡಿಸಲಾಗಿದೆ. ಎಲ್ಲಾ ಕಕ್ಷಿದಾರರಿಗೆ ಚಾರ್ಜ್‍ಶೀಟ್ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ನೀಡುವಂತೆ ನ್ಯಾಯಾಲಯವು ಜಾರಿ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ.
ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂ.ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಜೊತೆ ನಿಕಟ ಸಂಪರ್ಕ ಹೊಂದಿರುವ ಕಾರಣಕ್ಕೆ ನಟಿ ಜಾಕ್ವೆಲಿನ್ ಅವರ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಇಡಿ ಅಧಿಕಾರಿಗಳು ಹಲವು ಬಾರಿ ಜಾಕ್ವೆಲಿನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿನ್ನೆಲೆ ನಟಿ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣದ ಹಿನ್ನೆಲೆ: ರಾನ್‍ಬಾಕ್ಸಿ ಸಂಸ್ಥೆಯ ಶಿವಿಂದರ್ ಸಿಂಗ್ ಅವರು ಬೇರೊಂದು ಹಣ ಅವ್ಯವಹಾರ ಪ್ರಕರಣದಲ್ಲಿ ಕಳೆದ 2019ರಲ್ಲಿ ಜೈಲು ಸೇರಿದ್ದರು. ಅವರನ್ನು ಜೈಲಿನಿಂದ ಕರೆತರುವ ಭರವಸೆ ನೀಡಿದ್ದ ಸುಕೇಶ್ ಚಂದ್ರಶೇಖರ್, ಶಿವಿಂದರ್ ಪತ್ನಿ ಅವರಿಂದ 200 ಕೋಟಿ ರೂ. ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಶಿವಿಂದರ್ ಸಿಂಗ್ ಪತ್ನಿ ಅದಿತಿ ಸಿಂಗ್ ಸುಕೇಶ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಸುಕೇಶ್ ಚಂದ್ರಶೇಖರ್ ಜೊತೆ ನಟಿ ಜಾಕ್ವೆಲಿನ್ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದುಬಂದಿತ್ತು. ಕಳೆದ ಡಿಸೆಂಬರ್ ನಲ್ಲಿ ಪಿಎಂಎಲ್‍ಎ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ಆರೋಪಪಟ್ಟಿ ದಾಖಲಿಸಿತ್ತು. ನಟಿ ಜಾಕ್ವೆಲಿನ್ ಸೇರಿದಂತೆ ಕೆಲ ಬಾಲಿವುಡ್ ನಟ-ನಟಿಯರನ್ನು ಪ್ರಕರಣದ ಸಾಕ್ಷಿದಾರರೆಂದು ತೋರಿಸಿತ್ತು. ಅದಾದ ಬಳಿಕ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ನಿಕಟವಾಗಿರುವ ಫೋಟೋಗಳು ವೈರಲ್ ಆಗಿದ್ದವು.
ಜಾಕ್ವೆಲಿನ್‍ಗೆ ಐಷಾರಾಮಿ ಬಿಎಂಡಬ್ಲೂ ಕಾರನ್ನು ಉಡುಗೊರೆಯಾಗಿ ಸುಕೇಶ್ ಚಂದ್ರಶೇಖರ್ ನೀಡಿದ್ದ ಎಂದು ತಿಳಿದುಬಂದಿತ್ತು. ಅಲ್ಲದೇ ವಜ್ರದ ಬ್ರಾಸ್‍ಲೆಟ್, ಫ್ರಾಂಕ್ ಮುಲ್ಲರ್ ವಾಚ್, ದುಬಾರಿ ಬೆಲೆಬಾಳುವ ಗುಸ್ಸಿ, ಚಾನಲ್‍ಬ್ಯಾಗ್ ಸೇರಿದಂತೆ ಕುದುರೆಯೊಂದನ್ನೂ ನೀಡಿದ್ದ. ಅಲ್ಲದೇ ಜಾಕ್ವೆಲಿನ್ ಮ್ಯಾನೇಜರ್ ಅವರಿಗೂ ಸುಕೇಶ್ ಬೈಕ್ ಉಡುಗೊರೆಯನ್ನಾಗಿ ನೀಡಿದ್ದ ಎಂಬ ಮಾಹಿತಿ ಲಭಿಸಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನಟಿಯ ವಿಚಾರಣೆ ನಡೆಸುತ್ತಿದ್ದಾರೆ.
ಶ್ರೀಲಂಕಾ ಮೂಲದ ನಟಿ ಜಾಕ್ವೆಲಿನ್ ಫರ್ನಾಂಡಿಸ್ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚನಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: 100rs controversy : ಸರ್ಕಾರಿ ಶಾಲೆಗಳಲ್ಲಿ ದೇಣಿಗೆ ವಸೂಲಿ; ತನ್ನ ಪಾತ್ರವಿಲ್ಲ ಎಂದ ಶಿಕ್ಷಣ ಸಚಿವ
Jacqueline Fernandez’s interim bail extended to November 10th