Kantara America : ಕೆಜಿಎಫ್ ಹಾಗೂ ಕೆಜಿಎಫ್-2 ಬಳಿಕ ದೇಶ ಹಾಗೂ ವಿದೇಶದಲ್ಲಿ ಮಾರ್ದನಿಸಿದ ಒಂದೇ ಒಂದು ಹೆಸರು ಕಾಂತಾರ. ಸದ್ಯ ಗಳಿಕೆಯ ನಾಗಾಲೋಟ ದಲ್ಲಿರೋ ಈ ತುಳುನಾಡಿನ ಶ್ರೀಮಂತ ಸಂಸ್ಕೃತಿ ಬಿಂಬಿಸೋ ಸಿನಿಮಾ ಅಮೇರಿಕಾದಲ್ಲೂ ಭರ್ಜರಿ ಗಳಿಕೆ ಕಂಡಿದ್ದು ಸಿನಿಮಾ ರಂಗದ ಖ್ಯಾತ ನಾಮಾಂಕಿತರಿಂದಲೂ ಬೇಷ ಎಂಬ ಮೆಚ್ಚುಗೆ ಪಡೆದಿದೆ. ಕಾಂತಾರದ ದೈವ ಗಗ್ಗರ ವಿದೇಶದಲ್ಲೂ ತನ್ನ ಛಾಪು ಮೂಡಿಸಿದ್ದು, ವಾಷಿಂಗ್ಟನ್ ಸೇರಿದಂತೆ ಅಮೇರಿಕಾದಲ್ಲೂ ಯಶಸ್ವಿ ಪ್ರದರ್ಶನ ಕಾಣ್ತಿರೋ ಈ ಸಿನಿಮಾ ನೂತನ ದಾಖಲೆಯೊಂದನ್ನು ಬರೆದಿದೆ.
ಅಮೇರಿಕಾದ ಬಾಕ್ಸಾಫೀಸ್ ನಲ್ಲಿ ರಿಶಬ್ ಶೆಟ್ಟಿ ನಿರ್ಮಿಸಿ ನಟಿಸಿದ ಕಾಂತಾರ ಸಿನಿಮಾ ಬರೋಬ್ಬರಿ 1 ಮಿಲಿಯನ್ ಡಾಲರ್ ಗಳಿಸಿದೆ. ಅಮೇರಿಕಾದ 1 ಮಿಲಿಯನ್ ಡಾಲರ್ ಎಂದರೇ ಭಾರತದ ಲೆಕ್ಕಾಚಾರದಲ್ಲಿ ಬರೋಬ್ಬರಿ ಎಂಟೂವರೆ ಕೋಟಿ ರೂಪಾಯಿ. ಕೇವಲ ಅಮೇರಿಕಾದಲ್ಲಿ ಮಾತ್ರವಲ್ಲ ದೇಶದಲ್ಲೂ ಹಿಂದಿ ಸೇರಿದಂತೆ ವಿವಿಧ ಭಾಷೆಯಲ್ಲೂ ಕಾಂತಾರ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದ್ದು ಹೊಸ ಹೊಸ ದಾಖಲೆ ಬರೆಯುತ್ತಿದೆ.
ಇನ್ನೂ ಕನ್ನಡದಲ್ಲಿ ಕಾಂತಾರ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈಗಾಗಲೇ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಗಳಿಕೆಯ ದಾಖಲೆ ಕೆಜಿಎಫ್ ಹಾಗೂ ಕೆಜಿಎಫ್-2 ಚಿತ್ರದ ಹೆಸರಿನಲ್ಲಿದೆ. ಆದರೆ ಇನ್ನೂ ಹೌಸ್ ಫುಲ್ ಪ್ರದರ್ಶನ ಕಾಣ್ತಿರೋ ಕಾಂತಾರ ಇನ್ನೆರಡು ದಿನದಲ್ಲಿ ಕೆಜಿಎಫ್ ಹಾಗೂ ಕೆಜಿಎಫ್-2 ದಾಖಲೆಯನ್ನು ಮುರಿದು ಮುಂದಕ್ಕೆ ಸಾಗಲಿದೆ ಎನ್ನಲಾಗ್ತಿದೆ. ಇನ್ನು ಕಾಂತಾರ ಸಿನಿಮಾ ಕೇವಲ ಹಣ ಗಳಿಕೆಯಲ್ಲಿ ಮಾತ್ರವಲ್ಲ ಜನರ ಮೆಚ್ಚುಗೆ ಗಳಿಸುವಲ್ಲಿಯೂ ಹೊಸ ದಾಖಲೆ ಬರೆಯುವಂತಿದೆ.
ಕರ್ನಾಟಕದಾದ್ಯಂತ ಸಿನಿಮಾ ಮನೆ ಮನೆ ಮಾತಾಗಿದೆ. ಈ ಮಧ್ಯೆ ನವೆಂಬರ್ ನಲ್ಲಿ ಪ್ರಧಾನಿ ಮೋದಿ ಸಹ ಸಿನಿಮಾ ನೋಡಲಿದ್ದಾರೆ ಎನ್ನಲಾಗ್ತಿದೆ. ಇದರ ಮಧ್ಯೆಯೇ ಬಾಲಿವುಡ್ ನ ದಿ ಕಾಶ್ಮೀರಿ ಫೈಲ್ಸ್ ನಂತಹ ಸಿನಿಮಾ ತೆರೆಗೆ ತಂದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಕಾಂತಾರ ಸಿನಿಮಾಕ್ಕೆ ಮನಸೋತಿದ್ದಾರೆ. ಕಾಂತಾರ ಸಿನಿಮಾ ನೋಡಿಬಂದೆ. ಇದೊಂದು ಅದ್ಭುತ ಸಿನಿಮಾ. ಈ ರೀತಿಯ ಚಿತ್ರವನ್ನು ನೀವೆಂದು ನೋಡಿರಲ್ಲ. ನಾನಂತೂ ನೋಡಿಲ್ಲ. ರಿಶಬ್ ಶೆಟ್ಟಿಗೆ ಹ್ಯಾಟ್ಸಪ್. ರಿಶಬ್ ನೀವು ಅದ್ಭುತ ಕೆಲಸ ಮಾಡಿದ್ದೀರಿ. ನಿಮಗೆ ನಾನು ಕರೆ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಕಾಂತಾರಾ ಬಾಕ್ಸಾಫೀಸ್ ಜೊತೆಗೆ ಸಿನಿಪ್ರಿಯರ ಮನಸ್ಸಿನಲ್ಲೂ ಸ್ಥಾನ ಪಡೆಯುತ್ತಿದ್ದು, ಹಣಗಳಿಕೆಯಲ್ಲಿ ಎಲ್ಲಾ ಸಿನಿಮಾಗಳ ದಾಖಲೆ ಮುರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ : Rayan Raj Sarja : ಚಿರು ಸರ್ಜಾ – ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಬರ್ತಡೇ ಸಂಭ್ರಮ
ಇದನ್ನೂ ಓದಿ : ಕಾಂತಾರ ಸಿನಿಮಾ ಮೆಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ : ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ
kantara earned 8.5 crores in America