V.Somanna: ಮಹಿಳೆಗೆ ಕಪಾಳಮೋಕ್ಷ ವಿಚಾರಕ್ಕೆ ಕಾಂಗ್ರೆಸ್ ಟೀಕೆ; ಕೊನೆಗೂ ಕ್ಷಮೆಯಾಚಿಸಿದ ಸಚಿವ ಸೋಮಣ್ಣ..!

ಬೆಂಗಳೂರು: somanna apologized: ಚಾಮರಾಜನಗರದಲ್ಲಿ ನಿನ್ನೆ ಸಚಿವ ವಿ.ಸೋಮಣ್ಣ ನೆರವು ಕೋರಿ ಬಂದಿದ್ದ ಮಹಿಳೆಗೆ ಕಪಾಳಮೋಕ್ಷ ಮಾಡಿರುವ ವಿಚಾರ ಇದೀಗ ರಾಜಕೀಯ ಕಾವು ಪಡೆದುಕೊಂಡಿದೆ. ಘಟನೆಯಲ್ಲಿ ತನ್ನದೇನೂ ತಪ್ಪೇ ಇಲ್ಲ ಎಂದು ಹೇಳಿದ್ದ ಸಚಿವರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಕೈ ನಾಯಕರ ಟೀಕೆಗಳ ಬೆನ್ನಲ್ಲೇ ಎಚ್ಚೆತ್ತ ಸಚಿವ ಸೋಮಣ್ಣ ಕ್ಷಮೆಯಾಚಿಸಿದ್ದಾರೆ.

ಘಟನೆಯ ಹಿನ್ನೆಲೆ:ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ 175 ಜನರಿಗೆ ನಿನ್ನೆ ಮಧ್ಯಾಹ್ನ 3.30ರ ವೇಳೆಗೆ ನಿವೇಶನ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಸಚಿವರು ಮಾತ್ರ ಸಂಜೆ 6.30ರ ಸುಮಾರಿಗೆ ಕಾರ್ಯಕ್ರಮಕ್ಕೆ ತೆರಳಿದ್ದರು. ಹೀಗಾಗಿ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ತನ್ನ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರುವ ಸಲುವಾಗಿ ಹೋಗಿ ಕಾಲಿಗೆ ನಮಸ್ಕರಿಸಲು ಮುಂದಾದಾಗ ಸಚಿವರು ಆಕೆಯ ಕೆನ್ನೆಗೆ ಹೊಡೆದಿದ್ದರು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

ಎಲ್ಲೆಲ್ಲೂ ಸುದ್ದಿ ಹರಡುತ್ತಿದ್ದಾಗಲೇ ಎಚ್ಚೆತ್ತ ಸಚಿವ ಸೋಮಣ್ಣ ಮಹಿಳೆ ಕೆನ್ನೆಗೆ ತಾನು ಹೊಡೆದಿಲ್ಲ. ಆಕೆ ತನ್ನ ಕಾಲಿಗೆ ನಮಸ್ಕರಿಸಲು ಮುಂದಾದಾಗ ಅದನ್ನು ತಡೆಯಲು ಹೋಗಿ ಕೈ ತಾಗಿದೆ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದರು. ಈ ವಿಚಾರದಲ್ಲಿ ಮಹಿಳೆ ಕೂಡಾ ಉಲ್ಟಾ ಹೊಡೆದಿದ್ದು, ಸಚಿವರ ಬಗ್ಗೆ ಸುಖಾಸುಮ್ಮನೆ ಅಪವಾದ ಹೊರಿಸಲಾಗಿದೆ ಎಂದು ವಿ.ಸೋಮಣ್ಣ ಪರ ಬ್ಯಾಟಿಂಗ್ ಬೀಸಿದ್ದರು. ಈ ಬೆನ್ನಲ್ಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ನಿನ್ನೆ ನಡೆದ ಘಟನೆ ಬಿಜೆಪಿಗರ ಸಂಸ್ಕøತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದರು.

ಇದೀಗ ಕಪಾಳಮೋಕ್ಷ ವಿಚಾರದಲ್ಲಿ ಕಾಂಗ್ರೆಸ್ ಎಂಟ್ರಿಯಾಗಿದ್ದು, ಸಚಿವ ಸೋಮಣ್ಣ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಸೋಮಣ್ಣ ಸಚಿವನಾಗಲು ನಾಲಾಯಕ್. ಇವರಿಗೆ ಅಧಿಕಾರ ಕೊಟ್ಟಿದ್ದು ದಲಿತ ಮಹಿಳೆಯ ಮೇಲೆ ಕೈ ಮಾಡಲಿಕ್ಕಾ..? ಜನರ ಕಷ್ಟ ಕೇಳಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.

ರಾಯಚೂರಿನಲ್ಲಿ ಮಾತನಾಡಿದ ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ‘ಸ್ತ್ರೀಯರ ರಕ್ಷಣೆ ಮಾಡುವಂತೆ ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ನಿಂತು ಭಾಷಣ ಮಾಡುತ್ತಾರೆ. ಆದರೆ ಕರ್ನಾಟಕದ ಹಿರಿಯ ಸಚಿವರೊಬ್ಬರು ಮಹಿಳೆಯ ಕೆನ್ನೆಗೆ ಬಾರಿಸಿದ್ದಾರೆ.ಇದೇನಾ ಇವರು ಮಹಿಳೆಯರಿಗೆ ನೀಡುವ ಗೌರವ..?’ ಅಂತ ಪ್ರಶ್ನಿಸಿದರು. ಅಲ್ಲದೇ ಸಚಿವ ಸೋಮಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.

ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ದಿನೇಶ್ ಗುಂಡೂರಾವ್, ‘ನಾಲ್ಕು ಜನರಿಗೆ ಬುದ್ಧಿ ಹೇಳಬೇಕಾದ ಹಿರಿಯ ಸಚಿವ ಈ ರೀತಿ ವರ್ತಿಸುವುದು ಶೋಭೆ ತರುವುದಿಲ್ಲ. ಸ್ತ್ರೀಯರ ಬಗ್ಗೆ ಗೌರವವಿಲ್ಲದ ವ್ಯಕ್ತಿಗಳಿಂದ ಮಾತ್ರ ಇಂಥ ವರ್ತನೆ ತೋರಿಸಲು ಸಾಧ್ಯ’ ಎಂದು ಲೇವಡಿ ಮಾಡಿದರು.

ರಾಯಚೂರಿನಲ್ಲಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ‘ಸಚಿವ ಸೋಮಣ್ಣ ಮಹಿಳೆಯ ಬಳಿ ಬಹಿರಂಗವಾಗಿ ಕ್ಷಮೆ ಕೇಳಬೇಕು. ಗೃಹಸಚಿವರು ಜೀವಂತವಾಗಿದ್ದರೆ ಈ ಬಗ್ಗೆ ಕ್ರಮ ಕೈಗೊಳ್ಳಲಿ’ ಎಂದು ಆಕ್ರೋಶ ಹೊರಹಾಕಿದರು.

ಕೊನೆಗೂ ಕ್ಷಮೆಯಾಚಿಸಿದ ಸಚಿವ ಸೋಮಣ್ಣ:

ವಿವಾದ ತೀವ್ರವಾಗುತ್ತಿದ್ದಂತೆಯೇ ಸಚಿವ ಸೋಮಣ್ಣ ಕ್ಷಮೆಯಾಚಿಸಿದ್ದಾರೆ. ‘ನಿನ್ನೆಯ ಕಾರ್ಯಕ್ರಮದಲ್ಲಿ ತಾನು ಸಣ್ಣ ಅಪಚಾರವನ್ನು ಕೂಡಾ ಮಾಡಿಲ್ಲ. ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದೇನೆ. ಬಡಕುಟುಂಬದಿಂದಲೇ ಬಂದವನು ನಾನು. ನನಗೂ ಹೆಣ್ಣುಮಕ್ಕಳ ಬಗ್ಗೆ ಅಪಾರವಾದ ಗೌರವವಿದೆ. ನಿನ್ನೆ ನಡೆದ ಘಟನೆ ಘಟನೆಯೇ ಅಲ್ಲ. ಆಕೆ ಪದೇ ಪದೇ ವೇದಿಕೆ ಮೇಲೆ ಬರುತ್ತಿದ್ದರು. ತಾಯಿ ಎಷ್ಟು ಸಲ ಬರ್ತಿಯಾ ಅಂತ ವಿಚಾರಿಸಿದೆ. ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಕೈಯಿಂದ ಪಕ್ಕಕ್ಕೆ ಸರಿಸಿದೆ. ಅಷ್ಟೇ ಬಿಟ್ಟರೆ ಬೇರೇನೂ ಉದ್ದೇಶ ಇರಲಿಲ್ಲ. ಆಕೆಗೆ ಕೂಡಾ ನಿನ್ನೆ ನಿವೇಶನ ಹಕ್ಕು ಪತ್ರ ನೀಡಿದ್ದೇನೆ. ಇದಾಗಿಯೂ ಪ್ರಾಯಶಃ ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ’ ಎಂದು ಸಚಿವ ಸೋಮಣ್ಣ ಹೇಳಿದರು.

ಇನ್ನು ಘಟನೆ ಖಂಡಿಸಿ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಿ, ಗೋಬ್ಯಾಕ್ ಸೋಮಣ್ಣ ಎಂದು ಘೋಷಣೆ ಕೂಗಿದರು. ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಸೋಮಣ್ಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: India vs Pakistan Live : ಪಾಕಿಸ್ತಾನ ವಿರುದ್ಧ ಭಾರತಕ್ಕೆ ವಿರಾಟ ಜಯ, ಕಿಂಗ್ ಕೊಹ್ಲಿ ಆರ್ಭಟಕ್ಕೆ ಪಾಕ್ ಧೂಳೀಪಟ

ಇದನ್ನೂ ಓದಿ: Rayan Raj Sarja : ಚಿರು ಸರ್ಜಾ – ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾಗೆ ಬರ್ತಡೇ ಸಂಭ್ರಮ

v.somanna apologized ; congress leaders demands resignation of minister

Comments are closed.