ಬಾಲಿವುಡ್ ನ ಸ್ಟಾರ್ ದಂಪತಿ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ತಮ್ಮ ಮೊದಲ ಪುತ್ರನಿಗೆ ಇಟ್ಟ ಹೆಸರು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಬುದ್ಧಿ ಕಲಿಯದ ಸ್ಟಾರ್ ದಂಪತಿ ಎರಡನೇ ಪುತ್ರನಿಗೂ ಮೊಘಲ್ ದೊರೆಯ ಹೆಸರಿಡುವ ಮೂಲಕ ಮತ್ತೆ ಟ್ರೋಲ್ ಗೆ ಆಹಾರವಾಗಿದ್ದಾರೆ.

ಕರೀನಾ ಹಾಗೂ ಸೈಫ್ ದಂಪತಿ ತಮ್ಮ ಮೊದಲ ಪುತ್ರನಿಗೆ ತೈಮೂರ್ ಎಂದು ನಾಮಕರಣ ಮಾಡಿದ್ದರು. ಭಾರತದ ಮೇಲೆ ದಾಳಿ ಮಾಡಿದ ಟರ್ಕಿಶ್ ದೊರೆಯ ಹೆಸರಿಟ್ಟಿದ್ದಕ್ಕೆ ಟ್ರೋಲಿಗರು ಕರೀನಾ-ಸೈಫ್ ದಂಪತಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

ಈಗ ಮತ್ತೆ 5 ವರ್ಷಗಳ ಬಳಿಕ ಎರಡನೇ ಮಗುವಿನ ತಾಯಿಯಾಗಿರುವ ಕರೀನಾ,ಸೈಫ್, ಎರಡನೇ ಮಗನಿಗೆ ಮೊಘಲ್ ದೊರೆ ಜಹಾಂಗೀರ್ ಹೆಸರನ್ನು ನಾಮಕರಣ ಮಾಡಿದ್ದಾರೆ. ಎರಡನೇ ಮೊಮ್ಮಗನಿಗೆ ಜೆಹ್ ಎಂದು ನಾಮಕರಣಮಾಡಲಾಗಿದೆ ಎಂದು ಕರೀನಾ ತಂದೆ ಹೇಳಿದ್ದರು.

ಆದರೆ ಈಗ ಕರೀನಾ ಬರೆದಿರುವ ಪ್ರೆಗ್ನೆನ್ಸಿ ಬೈಬಲ್ ಪುಸ್ತಕದಲ್ಲಿ ತಮ್ಮ ಎರಡನೇ ಪುತ್ರನ ಹೆಸರನ್ನು ಜಹಾಂಗೀರ್ ಎಂದು ಉಲ್ಲೇಖಿಸಿದ್ದಾರೆ. ಈ ಕಾರಣಕ್ಕೆ ಕರೀನಾ-ಸೈಫ್ ದಂಪತಿ ಮತ್ತೊಮ್ಮೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ನಿಮಗೆ ದೇಶದ ಮೇಲೆ ಆಕ್ರಮಣ ಮಾಡಿದ ರಾಜರ ಮೇಲೆ ಈ ಪರಿ ಪ್ರೀತಿಯಾಕೆ ಎಂದು ಜನರು ಪ್ರಶ್ನಿಸಿದ್ದಾರೆ.

ಸದ್ಯ ತಮ್ಮ ಎರಡನೇ ಮಗುವಿನ ಆರೈಕೆಯಲ್ಲಿ ತೊಡಗಿರುವ ಕರೀನಾ ಜಾಹೀರಾತುಗಳಲ್ಲಿ ನಟಿಸಲು ಆರಂಭಿಸಿದ್ದು, ಕರೀನಾ ನಾಯಕಿಯಾಗಿರುವ ಲಾಲ್ ಸಿಂಗ್ ಚಡ್ಡಾ ಈ ವರ್ಷಾಂತ್ಯಕ್ಕೆ ತೆರೆ ಕಾಣಲಿದೆ.