ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು (Mahesh Baabu ) ಸರ್ಕಾರವಾರಿ ಪಟ್ಟ ಸಿನಿಮಾ ಪೂರೈಸಿದ್ದಾರೆ. ಅದರ ಒಂದು ಹಾಡು ಸೂಪರ್ ಡೂಪರ್ ಹಿಟ್ಟಾಗಿದೆ. ಮುಂದಿನ ತಿಂಗಳು ಸಿನಿಮಾ ತೆರೆಕಾಣುವ ನಿರೀಕ್ಷೆ ಇದೆ. ಇತ್ತ ರಾಜಮೌಳಿ ಜೊತೆ ಮಹೇಶ್ ಬಾಬು ಸಿನಿಮಾ ಮಾಡಲಿದ್ದಾರೆ ಅನ್ನೋ ದೊಡ್ಡಸುದ್ದಿಗೆ ಮತ್ತೆ ಮರುಜೀವ ದೊರೆತಿದೆ. ಹಿಂದೆ, ರಾಜಮೌಳಿ ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಗಾಳಿ ಸುದ್ದಿ ಮಾತ್ರ ನಿಂತಿರಲಿಲ್ಲ. ಇದಕ್ಕೆ ಕಾರಣ ಏನೆಂದರೆ, ಆರ್ ಆರ್ ಆರ್ ಸಿನಿಮಾ ಬಿಡುಗಡೆ ನಂತರ ಮಹೇಶ್ ಬಾಬು ಅವರಿಗಾಗಿ ಒಂದು ಸಿನಿಮಾ ಮಾಡುವ ಇರಾದೆಯನ್ನು ರಾಜಮೌಳಿ ಹೇಳಿಕೊಂಡಿದ್ದರು. ಮಹೇಶ್ ಬಾಬು ಈ ಆಫರ್ ಅನ್ನು ಒಪ್ಪಿಕೊಂಡಿದ್ದರು. ಆದರೆ, ಆರ್ ಆರ್ ಆರ್ ಸಿನಿಮಾ ಬಿಡುಗಡೆ ಕೊರೋನ ಕಾರಣದಿಂದ ಮೂರು ಬಾರಿ ಮುಂದಕ್ಕೆ ಹೋಯಿತು. ಹೆಚ್ಚುಕಮ್ಮಿ ಒಂದೂವರೆ ವರ್ಷಗಳ ಕಾಲ ಬಿಡುಗಡೆಭಾಗ್ಯ ಕಾಣಲಿಲ್ಲ.
ಇದನ್ನೂ ಓದಿ: Ramya Krishnan : 23 ವರ್ಷಗಳ ನಂತರ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ ನಟನೆ!!
ಈ ಮಧ್ಯೆ, ಮಹೇಶ್ ಬಾಬು ತಾವು ಒಪ್ಪಿಕೊಂಡಿದ್ದ ಎಲ್ಲ ಸಿನಿಮಾಗಳನ್ನು ಪೂರೈಸಿ ರಾಜಮೌಳಿ ಅವರಿಗಾಗಿ 6 ತಿಂಗಳುಗಳ ಕಾಲ ಕಾದಿದ್ದರಂತೆ. ಆರ್ ಆರ್ ಆರ್ ಬಿಡುಗಡೆ 2022ರ ಜನವರಿಯಿಂದ ಏಪ್ರಿಲ್ ತಿಂಗಳಿಗೆ ಮುಂದೂಡಲಾಯಿತು. ಆಗ ಮಹೇಶ್ ಬಾಬು ಮತ್ತೊಂದು ಸಿನಿಮಾ ಒಪ್ಪಿಕೊಂಡು ಅದರಲ್ಲಿ ತೊಡಗಿಕೊಂಡರು. ಈ ಮಧ್ಯೆ, ರಾಜಮೌಳಿ ಆರ್ ಆರ್ ಆರ್ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಮೇಲೆ ವಿಶ್ರಾಂತಿ ತೆಗೆದುಕೊಳ್ಳಲು ಕುಟುಂಬ ಸಮೇತ ದುಬೈಗೆ ಹೋದರು. ಇತ್ತ ಸರ್ಕಾರವಾರಿ ಪಟ್ಟ ಸಿನಿಮಾ ಮುಗಿಸಿದ ಮೇಲೆ ಮಹೇಶ್ ಬಾಬೂ ಕೂಡ ವಿಶ್ರಾಂತಿಗೆ ಎಂದು ದುಬೈನಲ್ಲಿ ತಂಗಿದ್ದರು. ಕಾಕತಾಳೀಯ ಎಂಬಂತೆ ಮಹೇಶ್ ಬಾಬು ಮತ್ತು ರಾಜಮೌಳಿ ದುಬೈನಲ್ಲಿ ಭೇಟಿಯಾದದ್ದೇ ತಡ, ಮತ್ತೊಮ್ಮೆ ಮಹೇಶ್ ಬಾಬು ಚಿತ್ರಕ್ಕೆ ರಾಜಮೌಳಿ ಕಥೆ ಚರ್ಚೆ ಮಾಡಲು ದುಬೈಗೆ ಹೋಗಿದ್ದಾರೆ ಎಂದು ಪುಕಾರಾಗಿಹೋಯಿತು.
ಈ ಬಗ್ಗೆ ಮಾತನಾಡಿರುವ ನಟ ಮಹೇಶ್ ಬಾಬು, ಇದು ಕೌಟುಂಬಿಕ ಪ್ರವಾಸ. ನಾವಿಬ್ಬರೂ ಪ್ಲಾನ್ ಮಾಡಿ ಬಂದಿದ್ದಲ್ಲ. ಅಚಾನಕ್ಕಾಗಿ ರಾಜಮೌಳಿ ಅವರು ದುಬೈನಲ್ಲಿ ಸಿಕ್ಕಿದ್ದರು. ಇಬ್ಬರೂ ಕುಶಲೋಪರಿ ಮಾತನಾಡಿ ನಮ್ಮ ನಮ್ಮ ದಾರಿ ಹಿಡಿದೆವು. ಇಲ್ಲಿ ಯಾವುದೇ ಸಿನಿಮಾ ಚರ್ಚೆಗಳು ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ದುಬೈ ನಂತರ ಮಹೇಶ್ ಬಾಬು, ಹೆಂಡತಿ ನಮ್ರತಾ ಶಿರೋಡ್ಕರ್, ಮಕ್ಕಳು ಪ್ಯಾರೀಸ್ ಗೆ ತಮ್ಮ ಪ್ರವಾಸವನ್ನು ಮುಂದವರಿಸಿದ್ದಾರೆ. ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಪ್ಯಾರೀಸ್ ನ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ.
ದುಬೈ ಪ್ರವಾಸದ ನಂತರ ರಾಜಮೌಳಿ ಅವರು ಹೈದರಾಬಾದ್ ಗೆ ವಾಪಸ್ಸಾಗಲಿದ್ದಾರೆ. ಆನಂತರ ಮುಂದಿನ ಚಿತ್ರದ ಬಗ್ಗೆ ಕೆಲಸ ಆರಂಭಿಸುವ ಸಾಧ್ಯತೆಗಳು ಇವೆ. ಇದಕ್ಕೆ ಅದ್ಬುತವಾದ ಕಥೆಯೊಂದನ್ನು ಕೆ.ವಿ. ವಿಜಯೇಂದ್ರ ಪ್ರಸಾದ್ ಬರೆಯಲಿದ್ದಾರೆ. ವಿಜಯೇಂದ್ರಪ್ರಸಾದ್ ಹೇಳಿಕೊಂಡಂತೆ ಇದೊಂದು ರೀತಿ ಕಾಡಿನ ರಹಸ್ಯದ ಕಥೆಯಾಗಿದ್ದು, ಸಿನಿಮಾ ಚಿತ್ರೀಕರಣ ದಕ್ಷಿಣ ಆಫ್ರೀಕಾದ ಕಾಡುಗಳಲ್ಲಿ ನಡೆಯುವ ಯೋಜನೆ ಇದೆಯಂತೆ.
ಒಟ್ಟಾರೆ, ರಾಜಮೌಳಿ ಅವರು ಮುಂದಿನ ಸಿನಿಮಾ ಹೀರೋ ಮಹೇಶ್ ಬಾಬು ಅನ್ನೋದು ಖರೆ. ಆದರೆ, ಆರಂಭ, ಕಥೆ, ಚಿತ್ರಥೆ ಎಲ್ಲವೂ ಬಹಳ ನಿಗೂಢವಾಗಿದೆ.
ಇದನ್ನೂ ಓದಿ: KGF 2 : ವಿಶ್ವದಾದ್ಯಂತ 900 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದ ಕೆಜಿಎಫ್ -2
(Mahesh Baabu said I didn’t do any film discussion with Rajamouli in Dubai)