- ಭಾಗ್ಯ ದಿವಾಣ
ಚಿತ್ರರಂಗವೇ ಹಾಗೆ. ಒಂದಷ್ಟು ನಟ ನಟಿಯರಿಗೆ ಮಣೆ ಹಾಕಿ ಮೆರೆಸಿದರೆ ಮತ್ತೊಂದಷ್ಟು ಮಂದಿ ಬಂದು ಒಂದೆರಡು ಸಿನಿಮಾದಲ್ಲಿ ಕಾಣಿಸಿಕೊಂಡು ಕ್ಲಿಕ್ ಆದರೂ ವರ್ಷದೊಳಗೆ ಸುದ್ದಿಯೇ ಇಲ್ಲದಂತಾಗಿ ಬಿಡುತ್ತಾರೆ. ಅವರ ನಟನೆಯ ಚಿತ್ರವನ್ನು ನೆನಪಿಟ್ಟುಕೊಂಡು ನಟ ನಟಿಯರ ಬಗ್ಗೆ ನಾವೇ ಹುಡುಕಾಡಬೇಕಷ್ಟೇ. ಅಂತಹವರ ಸಾಲಿನಲ್ಲಿ ನಮಗೆ ಮೊದಲು ನೆನಪಾಗುವವರು ʼನೆನಪಿರಲಿʼ ಚಿತ್ರದ ನಟಿ ವರ್ಷ.

2005ರಲ್ಲಿ ತೆರೆಕಂಡ ʻನೆನಪಿರಲಿʼ ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲಿ ಲವ್ಲಿ ಸ್ಟಾರ್ ಪ್ರೇಮ್, ನವೀನ್ ಕೃಷ್ಣ, ವಿದ್ಯಾ ವೆಂಕಟೇಶ್ ಹಾಗೂ ವರ್ಷ ಎಲ್ಲರ ಮನಗೆದ್ದವರು. ಅದ್ರಲ್ಲೂ ಸಿನಿಮಾದ ಸೆಕೆಂಡ್ ಹಾಫ್ ನಲ್ಲಿ ಮಿಂಚಿದರೂ ಬಿಂದು ಪಾತ್ರಧಾರಿ ವರ್ಷ ಎಲ್ಲರಿಂದಲೂ ಶಹಭಾಸ್ ಗಿಟ್ಟಿಸಿಕೊಂಡಿದ್ದರು. ಸಿನಿಮಾ ಜೀವನಕ್ಕೂ ಮುನ್ನ ನಿರೂಪಕಿಯಾಗಿದ್ದ ಈ ನಟಿ ಈ ಚಿತ್ರ ಮುಗಿಸಿಕೊಂಡು 2008ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋಮ್ ಬ್ಯಾನರ್ ನಲ್ಲಿ, ದಿನಕರ್ ತೂಗುದೀಪ ನಿರ್ದೇಶನದ ಮಲ್ಟಿ ಸ್ಟಾರ್ ಚಿತ್ರ ʻನವಗ್ರಹʼದಲ್ಲೂ ಬಣ್ಣ ಹಚ್ಚಿದ್ದರು.

ಆದರೆ ಅದಾದ ಬಳಿಕ ಈ ನಟಿ ಚಿತ್ರರಂಗವನ್ನೇ ತೊರುದುಬಿಟ್ಟಿದ್ದರು. ಸುಮಾರು 10 ವರ್ಷಗಳ ಕಾಲ ಚಿತ್ರರಂಗದಲ್ಲಿ ಇವರ ಹೆಸರೂ ಎಲ್ಲೂ ಕೇಳಿ ಬಂದುದೇ ಇಲ್ಲ. ಈ ನಡುವೆ ಕಾಮೇಶ್ ಎಂಬವರೊಡನೆ ವಿವಾಹಿತರಾದ ವರ್ಷ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿ ದ್ದಾರೆ. ಈ ವೇಳೆ ಕನ್ನಡದ ಕೆಲವು ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ಪತಿ, ಮಕ್ಕಳು, ಮನೆ ಅಂತ ವೈಯಕ್ತಿಕ ಬದುಕಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು.

ಸದ್ಯ 12 ವರ್ಷಗಳ ಬಳಿಕ ವರ್ಷ ಮತ್ತೆ ಬಣ್ಣ ಹಚ್ಚಿದ್ದಾರೆ..ಆದರೆ ಈ ಬಾರಿ ಸಿನಿಮಾಲ್ಲಲ್ಲ. ಬದಲಾಗಿ ಯೂಟ್ಯೂಬ್ ಸೀರೀಸ್ ಒಂದರಲ್ಲಿ. ಹೌದು. ಪಾಪ ಪಾಂಡು ಖ್ಯಾತಿಯ ನಟಿ ಶಾಲಿನಿ ಜೊತೆಗೂಡಿ “ಶಾಲಿವುಡ್” ಎಂಬ ಯೂ ಟ್ಯೂಬ್ ಚಾನೆಲ್ ಹುಟ್ಟು ಹಾಕಿರುವ ಇವರು, ಪ್ರತಿವಾರವೂ ತಾಯಿ ಮಗಳ ಹಾಸ್ಯಭರಿತ ಸಂಭಾಷನೆಯನ್ನೊಳಗೊಂಡ ವೆಬ್ ಸೀರೀಸ್ ಎಪಿಸೋಡ್ ಗಳನ್ನು ಮಾಡುತ್ತಿದ್ದಾರೆ. ನಟನೆಯ ಜೊತೆಗೆ ಇದರ ಸ್ಕ್ರಿಪ್ಟಿಂಗ್ ನ ಹೊಣೆಯನ್ನೂ ಹೊತ್ತಿದ್ದಾರೆ. ತಿಂಗಳ ಹಿಂದೆ ಪ್ರಾರಂಭವಾದ ಈ ವೆಬ್ ಸೀರೀಸ್ ಈಗಾಗಲೇ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆದರೆ ಈ ಸೀರೀಸ್ ನಲ್ಲಿ ವರ್ಷಾರನ್ನು ನೋಡಿದ ಮಂದಿ ಮಾತ್ರ ಇವರು ನೆನಪಿರಲಿ ವರ್ಷ ಹೌದೇ ಎಂಬ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ವರ್ಷರವರ ನ್ಯೂ ಲುಕ್. ಮುದ್ದು ಮೊಗದ ಹುಡುಗಿ, ಸಖತ್ತಾಗಿರೋ ಲಾಂಗ್ ಹೇರ್. ಅಬ್ಬಬ್ಬಾ. ಅಂದಿನ ದಿನಗಳಲ್ಲಿ ವರ್ಷಾರನ್ನು ಕನಸು ಕಾಣದ ಪಡ್ಡೆ ಹುಡುಗರೇ ಇಲ್ಲ ಎಂಬತ್ತಾಗಿತ್ತು.

ಆದ್ರೀಗ ಮದ್ವೆ, ಮಕ್ಕಳಾದ ನಂತ್ರ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವ ಈ ನಟಿ ಸದ್ಯ ಲಾಕ್ ಡೌನ್ ಕಾರಣದಿಂದ ಕೂದಲಿಗೂ ಕತ್ತರಿ ಹಾಕಿಕೊಂಡು ಹೊಸ ಲುಕ್ ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಒಮ್ಮೆ ಮಿಂಚಿ ಮರೆಯಾಗಿ ಉಳಿದಿದ್ದ ನಟಿ ವರ್ಷ, ಈ ವೆಬ್ ಸೀರೀಸ್ ಮೂಲಕವಾದರೂ ಮತ್ತೆ ಬಣ್ಣದ ಬದುಕಿಗೆ ವಾಪಾಸ್ಸಾಗಲಿದ್ದಾರಾ ಎಂಬುದು ವರ್ಷಾರ ಅಭಿಮಾನಿಗಳ ಪ್ರಶ್ನೆ.