ಶಾಲೆ ಬೇಡವೇ ಬೇಡ ಅಂತಿದ್ದಾರೆ ಪೋಷಕರು : ಈ ಬಾರಿ ಶೂನ್ಯ ಶೈಕ್ಷಣಿಕ ವರ್ಷ !

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಆರ್ಭಟದ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷ ಇನ್ನೂ ಆರಂಭವಾಗಿಲ್ಲ. ಪೋಷಕರು ಶಾಲೆ ಆರಂಭ ಬೇಡವೇ ಬೇಡ ಎನ್ನುತ್ತಿದ್ದಾರೆ. ಈ ನಡುವಲ್ಲೇ ಈ ಬಾರಿ ಶೂನ್ಯ ಶೈಕ್ಷಣಿಕ ವರ್ಷ ಘೋಷಣೆ ಮಾಡುವಂತೆ ಕೂಗು ಕೇಳಿಬರುತ್ತಿದೆ.

ರಾಜ್ಯದಲ್ಲಿ ನಿತ್ಯವೂ ಹತ್ತು ಸಾವಿರಕ್ಕೂ ಅಧಿಕ ಮಂದಿ ಹೊಸದಾಗಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ರಾಜ್ಯದ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯ ಮೂಲಕ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಶಿಕ್ಷಣವನ್ನು ಬೋಧಿಸಲಾಗುತ್ತಿದ್ರೆ, ಖಾಸಗಿ ಶಾಲಾ ಮಕ್ಕಳಿಗೆ ಅನ್ ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಈ ನಡುವಲ್ಲೇ ರಾಜ್ಯ ಸರಕಾರ ಶಾಲಾರಂಭದ ಕುರಿತು ಮಾರ್ಗಸೂಚಿ ಹೊರಡಿಸಿದೆ. ಆದರೆ ಇಲಾಖೆ ಅಡ್ಡಗೋಡೆಯ ಮೇಲೆ ದೀಪವಿಡುವ ಕಾರ್ಯವನ್ನು ಮಾಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

ಶಾಲಾರಂಭವಾಗದೇ ಮಕ್ಕಳು ಬಾಲ ಕಾರ್ಮಿಕರಾಗಿ ಬದಲಾಗುತ್ತಿದ್ರೆ, ಬಾಲ್ಯ ವಿವಾಹಕ್ಕೂ ಕಾರಣವಾಗುತ್ತಿದೆ. ಅಲ್ಲದೇ ಮಕ್ಕಳ ಜ್ಞಾನಾರ್ಜನೆಯ ಪ್ರಮಾಣ ಕಡಿಮೆಯಾಗುತ್ತಿದ್ರೆ, ಆನ್ಲೈನ್ ಶಿಕ್ಷಣಕ್ಕೆ ಹಲವು ಕಡೆಗಳಲ್ಲಿ ನೆಟ್ವರ್ಕ್ ಸಮಸ್ಯೆ ಕಂಡುಬರುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿಯೇ ಕೆಲ ಶಿಕ್ಷಣ ತಜ್ಞರು ಶಾಲಾರಂಭವೇ ಸೂಕ್ತ ಎನ್ನುತ್ತಿದ್ದಾರೆ.

ಆದರೆ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲೆಗಳನ್ನು ಆರಂಭಿಸುವುದು ಕಷ್ಟದ ಕೆಲಸ. ಕೊರೊನಾ ನಡುವಲ್ಲೇ ಮಕ್ಕಳು ಶಾಲೆಗೆ ಬರುವುದರಿಂದ ಕೊರೊನಾ ಸೋಂಕು ವ್ಯಾಪಿಸುವ ಸಾಧ್ಯತೆಯಿದೆ. ಮಕ್ಕಳಿಂದ ಮನೆಯವರಿಗೂ ಕೊರೊನಾ ಸೋಂಕು ಬಾಧಿಸಬಹುದು. ಅಲ್ಲದೇ ಕೊರೊನಾ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಪೋಷಕರಿಗೆ ಆತಂಕವನ್ನು ಮೂಡಿಸಿದೆ.

ಇನ್ನು ರಾಜ್ಯದಲ್ಲಿನ ಶಾಲೆಗಳಲ್ಲಿ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ಯಾನಿಂಗ್ ಕಷ್ಟಸಾಧ್ಯ. ಮಾತ್ರವಲ್ಲ ಒಂದಿಡೀ ದಿನ ಸಣ್ಣ ಮಕ್ಕಳು ಮಾಸ್ಕ್ ಧರಿಸಿಕೊಂಡೇ ಇರುವುದರಿಂದ ಆರೋಗ್ಯ ಸಮಸ್ಯೆ ಎದುರಾಗಬಹುದು. ಶಿಕ್ಷಣ ಹಾಗೂ ಮಕ್ಕಳ ಆರೋಗ್ಯದ ವಿಚಾರ ದಲ್ಲಿ ಬಹುತೇಕ ಪೋಷಕರು ತಮಗೆ ಮಕ್ಕಳ ಆರೋಗ್ಯವೇ ಮುಖ್ಯ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಶಿಕ್ಷಕರು ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಸಮಸ್ಯೆ ಎದುರಾಗಿದ್ರೆ, ಸರಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರು ವಿದ್ಯಾಗಮ ಯೋಜನೆಯೂ ಸವಾಲಿನ ಕೆಲಸವಾಗಿದೆ. ಕೊರೊನಾ ಸೋಂಕು ತೀವ್ರ ವಾಗಿ ಹರಡುತ್ತಿರುವ ವೇಳೆಯಲ್ಲಿಯೇ ಮಕ್ಕಳನ್ನು ಶಾಲೆಯ ಹೊರಗೆ ಭೇಟಿ ಮಾಡುತ್ತಿರುವುದರಿಂದಲೂ ಸೋಂಕು ಹರಡುವಿಕೆಯ ಭೀತಿ ಎದುರಾಗಿದೆ.

ಈಗಾಗಲೇ ನೂರಾರು ಶಿಕ್ಷಕರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರೆ, ಹಲವು ಶಿಕ್ಷಕರು ಇನ್ನೂ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ರಾಜ್ಯ ಸರಕಾರ ಖಾಸಗಿ ಶಾಲೆಗಳ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆಯನ್ನು ಮಾಡಿ, ಶಾಲೆಗಳ ಸಾಲಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಸರಕಾರ ಶಿಕ್ಷಣಕ್ಕಾಗಿ ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು ಕೊರೊನಾ ಕಾಲದಲ್ಲಿ ಸದ್ಬಳಕೆ ಮಾಡಿವ ಮೂಲಕ ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡಬೇಕೆಂದು ಕೆಲ ಶಿಕ್ಷಕರು ಒತ್ತಾಯಿಸುತ್ತಿದ್ದಾರೆ.

Leave A Reply

Your email address will not be published.