ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲವಾಗಿ ನಾಲ್ಕು ತಿಂಗಳು ಕಳೆದಿದೆ. ಇಂದು ಪುನೀತ್ ರಾಜ್ ಕುಮಾರ್ (Puneet RajKumar) ಕುಟುಂಬಸ್ಥರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ಹೆಸರನ್ನು ಉದ್ಯಾನವನ, ರಸ್ತೆ, ಸಭಾಭವನ ಅಷ್ಟೇ ಯಾಕೆ ಮಕ್ಕಳಿಗೂ ಇಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ಉನ್ನತ ಶಿಕ್ಷಣ ಸಚಿವರು ಅಪ್ಪು ಫ್ಯಾನ್ಸ್ ಗೆ ಇನ್ನೊಂದು ಸಿಹಿಸುದ್ದಿ ನೀಡಿದ್ದಾರೆ. ಹೌದು ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ (Puneet Raj Kumar Satellite) ಉಪಗ್ರಹವೊಂದು ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ ಎಂಬ ಸಂಗತಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಪುನೀತ್ ರಾಜ್ ಕುಮಾರ್ (Puneet Raj Kumar Satellite) ಹೆಸರಿನಲ್ಲಿ ಉಪಗ್ರಹವೊಂದು ಉಡಾವಣೆ ಯಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ. 1.90 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಉಪಗ್ರಹ 2022 ರ ಅಗಸ್ಟ್ ಅಥವಾ ಸಪ್ಟೆಂಬರ್ ನಲ್ಲಿ ಉಪಗ್ರಹ ಉಡಾವಣೆ ಯಾಗಲಿದೆ ಎಂದಿದ್ದಾರೆ. 1.5 ಕೆಜಿ ತೂಕದ ಈ ಉಪಗ್ರಹವನ್ನು ಎಲ್ಲಿಂದ ಉಡಾವಣೆ ಮಾಡಲಾಗುತ್ತಿದೆ. ಯಾವ ಅಧ್ಯಯನಕ್ಕಾಗಿ ಈ ಉಪಗ್ರಹ ಬ್ಯಾಹ್ಯಾಕಾಶಕ್ಕೆಚಿಮ್ಮಲಿದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈಗಾಗಲೇ ನಗರದಲ್ಲಿ ಅತಿ ಉದ್ದದ ರಸ್ತೆಯೊಂದಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ. ನಾಯಂಡನಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ವರೆಗಿನ 12 ಕಿಲೋಮೀಟರ್ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿನ ನಾಮಕರಣ ನಡೆದಿದೆ. ಮಾತ್ರವಲ್ಲ ಈಗಾಗಲೇ ಬಿಬಿಎಂಪಿ ಆವರಣದಲ್ಲಿ ನಟ ಪುನೀತ್ ರಾಜ್ ಕುಮಾರ್ (Puneet RajKumar) ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ಕಂಚಿನ ಪುತ್ಥಳಿ ಅಂತಿಮ ಹಂತದಲ್ಲಿದೆ. ಈಗಾಗಲೇ ಇರುವ ಡಾ.ರಾಜ್ ಕುಮಾರ್ ಪ್ರತಿಮೆಯ ಪಕ್ಕದಲ್ಲೇ ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಬಿಬಿಎಂಪಿ ಉದ್ಯೋಗಿಗಳ ಸಂಘ ನಿರ್ಧರಿಸಿ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಈ ಪುತ್ಥಳಿ ಸ್ಥಾಪನೆಗೆ ಸರ್ಕಾರ ಅಸ್ತು ಎಂದಿದೆ. ಇನ್ನು ನಟ ಪುನೀತ್ ರಾಜ್ ಕುಮಾರ್ ಗೆ ರಾಜ್ಯ ಸರ್ಕಾರ ಈಗಾಗಲೇ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದು ಸದ್ಯದಲ್ಲೇ ಪ್ರಶಸ್ತಿ ಪ್ರಧಾನದ ದಿನಾಂಕವನ್ನು ಘೋಷಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಮರಣದ ಬಳಿಕ ಪುನೀತ್ ಕರುನಾಡಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.
ಇದನ್ನೂ ಓದಿ: ಜೇಮ್ಸ್ ಗೆ ಅದ್ದೂರಿ ಸ್ವಾಗತ : ದೇಶದ ಹಲವೆಡೆ ಗ್ರ್ಯಾಂಡ್ ಫ್ರೀ ರಿಲೀಸ್ ಇವೆಂಟ್ ಆಯೋಜಿಸಿದ ಚಿತ್ರತಂಡ
ಇದನ್ನೂ ಓದಿ : ಪುನೀತ್ ರಾಜ್ ಕುಮಾರ್ ಪ್ರೇರಣೆ : ನೇತ್ರದಾನಕ್ಕೆ ಒಂದೇ ದಿನ 1000 ಕ್ಕೂ ಅಧಿಕ ಮಂದಿ ನೋಂದಣಿ
(Puneet Raj Kumar Satellite launched)