Puneeth Rajkumar’s life success story: ದೇವತಾಮನುಷ್ಯನಾದ ಪುನೀತ್‌ ರಾಜ್‌ ಕುಮಾರ್‌ ಅವರ ಜೀವನ ಯಶೋಗಾಥೆ

(Puneeth Rajkumar’s life success story) ಕರುನಾಡ ಕಣ್ಮಣಿ, ಅಭಿಮಾನಿಗಳ ಪಾಲಿನ ದೇವರು, ಪ್ರೀತಿಯ ಅಪ್ಪು ಅಂತಲೇ ಅಭಿಮಾನಿಗಳ ಹೃದಯದಲ್ಲಿ ಚಿರಸ್ಮರಣೀಯರಾಗಿ ಉಳಿದಿರುವ ಏಕೈಕ ನಟ ಪುನೀತ್‌ ರಾಜಕುಮರ್‌ ಅವರು. ಕನ್ನಡ ಚಿತ್ರರಂಗದಲ್ಲಿಯೇ ಅಪಾರ ಹೆಸರನ್ನು ಗಳಿಸಿ ಅಭಿಮಾನಿಗಳಿಂದ ಅಪ್ಪು ಅಂತಲೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಪುನೀತ್‌ ರಾಜ್‌ ಕುಮಾರ್‌ ಅವರು ಹುಟ್ಟಿದ್ದು, ಮಾ, 17, 1975 ರಲ್ಲಿ. ವರನಟ ಡಾ. ರಾಜ್‌ ಕುಮಾರ್‌ ಹಾಗೂ ಪಾರ್ವತಮ್ಮ ಅವರ ಕಿರಿಯ ಪುತ್ರನಾಗಿ ಜನಿಸಿ ತನ್ನ ಆರನೇ ತಿಂಗಳಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಮಹಾನ್‌ ಕಲಾವಿದರಿವರು.

ಪುನೀತ್‌ ಆರು ತಿಂಗಳ ಮಗುವಾಗಿದ್ದಾಗ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಅಲ್ಲಿಂದ ಸವರ ಕಲಾ ಪಯಣ ಪ್ರಾರಂಭವಾಯಿತು. ಚಿಕ್ಕ ವಯಸ್ಸಿನಲ್ಲಿಯೇ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತರು ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅಲ್ಲದೇ ಚಿಕ್ಕ ವಯಸ್ಸಿನಲ್ಲಿಯೇ ನಟನೆಯ ಜೊತೆಗೆ ಸಂಗೀತದಲ್ಲಿಯೂ ಪರಿಣಿತರಾಗಿದ್ದ ಪುನೀತ್‌ ರಾಜ್‌ ಕುಮಾರ್‌ ಅನೇಕ ಹಾಡುಗಳನ್ನು ಕೂಡ ಹಾಡಿ ಸೈ ಎನಿಸಿಕೊಂಡಿದ್ದಾರೆ. ಬಾಲ್ಯದ ವಯಸ್ಸಿನಲ್ಲಿಯೇ ಅತ್ಯುತ್ತಮ ಬಾಲನಡ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಹೆಮ್ಮೆ ಇವರದ್ದು.

ನಂತರ ಪುರಿ ಜಗನ್ನಾಥ ನಿರ್ದೇಶನದ ಅಪ್ಪು ಚಿತ್ರದ ಮೂಲಕ ನಾಯಕನಟನಾಗಿ 2002 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ದೂಳೆಬ್ಬಿಸಲು ಪ್ರಾರಂಭಿಸಿದ ಪುನೀತ್‌ ರಾಜ್‌ ಕುಮಾರ್‌ ಅದ್ದೂರಿ ಯಶಸ್ಸನ್ನು ಕಂಡರು. ಅಭಿ, ವೀರ, ಕನ್ನಡಿಗ, ಮೌರ್ಯ, ಆಕಾಶ್‌, ನಮ್ಮ ಬಸವ ಹೀಗೆ ಮುಂತಾದ ಸಿನಿಮಾಗಳು ಬಾಕ್ಸ್‌ ಆಫೀಸ್‌ ನಲ್ಲಿ ಹಿಟ್‌ ಆದವು. ನಾಯಕನಟನಾಗಿ ಎರಡು ರಾಜ್ಯ ಪ್ರಶಸ್ತಿ, ನಾಲ್ಕು ಫಿಲ್ಮ್‌ ಫೇರ್‌ ಪ್ರಶಸ್ತಿ, ಎರಡು ಸೈಮಾ ಪ್ರಶಸ್ತಿ ಹಾಗೂ ಇನ್ನೂ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಗಾಯಕನಾಗಿಯೂ ಅನೇಕ ಸಿನಿಮಾಗಳಲ್ಲಿ ಹಾಡಿ, ಅದರಿಂದ ಬರುವ ಹಣವನ್ನು ಸಮಾಜ ಸೇವೆಗಾಗಿ ಉಪಯೋಗಿಸುತ್ತಿದ್ದರು. ನಾಯಕನಟನಾಗಿ ಅಲ್ಲದೇ ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ `ಬೆಂಗಳೂರು ಪ್ರೀಮೀಯರ್ ಪುಟ್‌ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ.ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು LED ಬಲ್ಬ್‌ಗಳ ರಾಯಭಾರಿಯಾಗಿ ಕೂಡ ಪ್ರಸ್ತುತರು. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು. ತಮ್ಮ ಜೀವನ ಸಂಗಾತಿ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಹಾಗೂ ಇಬ್ಬರು ಹೆಣ್ಣು ಮಕ್ಕಳಾದ ವಂದಿತಾ ಹಾಗೂ ಧೃತಿ ಜೊತೆಗೆ ಅದ್ಭುತ ಜೀವನ ಸಾಗಿಸಿ, ಅಭಿಮಾನಿಗಳ ಹೃದಯದಲ್ಲೂ ದೇವರಾಗಿ ಉಳಿದಿದ್ದಾರೆ.

ಆದರೆ ಇಂತಹ ಒಬ್ಬ ಸಮಾಜ ಸೇವಕ, ಅದ್ಬುತ ನಟ, ಅಭಿಮಾನಿಗಳ ದೇವರು ಹೃದಯಾಘಾತದಿಂದಾಗಿ ನಿಧನ ಹೊಂದಿದರು. ಕನ್ನಡ ಚಿತ್ರರಂಗಕ್ಕೆ ಈ ಸುದ್ದಿ ಬರಸಿಡಿಲು ಬಡಿದಂತಾಗಿದ್ದು, ಸಿನಿಮಾರಂಗವ;ಲ್ಲದೇ ಇಡೀ ಕರ್ನಾಟಕದ ಜನತೆಯೂ ಇವರ ಸಾವಿಗೆ ಕಣ್ಣೀರು ಹಾಕಿದ್ದರು. ಕನ್ನಡದ ನಟರಲ್ಲದೇ ಬೇರೆ ಬಾಷೆಯ ನಟರ ಜೊತೆಗೂ ಅದ್ಭುತ ನಂಟನ್ನು ಹೊಂದಿದ್ದ ಪುನೀತ್‌ ರಾಜ್‌ ಕುಮಾರ್‌ ಅವರ ಸಾವಿನ ಸುದ್ದಿ ಎಲ್ಲಾ ಚಿತ್ರರಂಗದ ನಟರಲ್ಲಿಯೂ ಕಣ್ಣಿರು ತರಿಸಿದ್ದು ಮಾತ್ರ ಇಂದಿಗೂ ಮರೆಯಲಾಗದು.

ಇದನ್ನೂ ಓದಿ : ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವೇ “ಕಬ್ಜ” ರಿಲೀಸ್‌ : ಕಾರಣ ತಿಳಿಸಿದ ಆರ್‌ ಚಂದ್ರು

ಅವರು ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ, ಸಮಾಜ ಕಾರ್ಯಗಳು, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಈ ಎಲ್ಲಾ ಸಾಮಾಜಿಕ ಕಳಕಳಿಯನ್ನು ಗುರುತಿಸಿದ ಮೈಸೂರು ವಿಶ್ವವಿದ್ಯಾಲಯ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಮರಣೋತ್ತರ ಡಾಕ್ಟರೇಟ್‌ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಿದೆ. ಅವರ ಸಮಾಜಮುಖಿ ಕಾರ್ಯಗಳು, ಅವರ ಸರಳತೆ, ಅಭಿಮಾನಿಗಳನ್ನು ನೋಡುವ ರೀತಿ ಎಲ್ಲವೂ ಕೂಡ ಅಭಿಮಾನಿಗಳ ಹೃದಯದಲ್ಲಿ ಅವರನ್ನು ದೇವರಂತೆ ನೋಡುವ ಭಾವನೆಯನ್ನು ಹುಟ್ಟುಹಾಕಿದೆ. ಅವರ ಸಾವಿನ ನಂತರ ಹಲವು ಕಡೆಗಳಲ್ಲಿ ದೇವರ ಭಾವಚಿತ್ರದ ಜೊತೆಗೆ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಮಾಡುವುದನ್ನು ಕೂಡ ನೋಡಿದ್ದೇವೆ. ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದು ಹಲವರ ಬಾಳಿಗೆ ಬೆಳಕಾಗಿರುವ ಪುನೀತ್‌ ರಾಜ್‌ ಕುಮಾರ್‌ ಎಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತ.

Puneeth Rajkumar’s life success story: Puneeth Rajkumar’s life success story

Comments are closed.