ಬೆಂಗಳೂರು : ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪರ ಸ್ಟಾರ್ ಪ್ರಚಾರಕಿಯಾಗಿ ಪ್ರಚಾರ ಮಾಡಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ವಿರುದ್ದ ಇದೀಗ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈ ನಡುವಲ್ಲೇ ರಾಜ್ಯ ಬಿಜೆಪಿ ನಟಿ ರಾಗಿಣಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದೆ.

ನಟಿ ರಾಗಿಣಿ ಬಂಧನವಾಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಹಾಗೂ ರಾಗಿಣಿ ಸಂಬಂಧದ ಬಗ್ಗೆ ಚರ್ಚೆಗಳು ನಡೆಯೋದಕ್ಕೆ ಶುರುವಾಗಿದ್ದವು. ಕಳೆದ ಚುನಾವಣೆಯಲ್ಲಿ ಬಿಜೆಪಿ ಪರ ರಾಗಿಣಿ ಪ್ರಚಾರ ಮಾಡಿದ್ದಾರೆ. ಮಾತ್ರವಲ್ಲ ಬಿಜೆಪಿಯ ಹಲವು ನಾಯಕರ ಜೊತೆಗೂ ರಾಗಿಣಿ ಗುರುತಿಸಿಕೊಂಡಿದ್ದಾರೆ.

ಇನ್ನು ರಾಗಿಣಿ ಬಿಜೆಪಿ ನಾಯಕರ ಜೊತೆಯಲ್ಲಿರುವ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರತಿಪಕ್ಷಗಳು ಕೂಡ ಬಿಜೆಪಿಯ ವಿರುದ್ದ ಆರೋಪವನ್ನು ಮಾಡಿವೆ. ಇದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಈ ನಡುವಲ್ಲೇ ರಾಜ್ಯ ಬಿಜೆಪಿ ನಟಿ ರಾಗಿಣಿ ದ್ವಿವೇದಿ ವಿಚಾರದಲ್ಲಿ ಸ್ಪಷ್ಟನೆಯನ್ನು ನೀಡಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರಾಗಿಣಿಗೂ, ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಮಾಧ್ಯಮ ಘಟಕ ಪ್ರಕಟಣೆ ಹೊರಡಿಸಿದೆ.

ರಾಗಿಣಿ ಬಿಜೆಪಿ ಸದಸ್ಯರಲ್ಲ. ಬಿಜೆಪಿ ಅವರಿಗೆ ಚುನಾವಣೆಯ ಕಾರ್ಯಭಾರವಹಿಸಿಲ್ಲ. ಅವರು ಸ್ವತಃ ಬಂದು ಚುನಾವಣೆಯ ಪ್ರಚಾರಲ್ಲಿ ಭಾಗಿಯಾಗಿದ್ದರು ಎಂದು ರಾಜ್ಯ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.