“ಸಾಹಸಸಿಂಹ” ಬಿರುದು ಸಿಗಲು ಬರೀ ಆ ಸಿನಿಮಾ ಕಾರಣ ಅಲ್ಲ : ಸ್ವತಃ ನಟ ವಿಷ್ಣುವರ್ಧನ್‌ ಈ ಬಗ್ಗೆ ಹೇಳಿದೇನು ?‌

ಸ್ಯಾಂಡಲ್‌ವುಡ್‌ನ ಡಾ. ವಿಷ್ಣುವರ್ಧನ್ (Sahasasimha Dr Vishnuvardhan) ನಿಧನವಾದ ಹದಿಮೂರು ವರ್ಷಗಳ ಬಳಿಕ ಸರಕಾರವು ಸ್ಮಾರಕ ನಿರ್ಮಾಣ ಮಾಡಿದೆ. ಮೈಸೂರಿನ ಎಚ್‌ಡಿ ಕೋಟೆ ರಸ್ತೆಯ ಹಾಲಾಳು ಬಳಿ ಸ್ಮಾರಕವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದ್ದು, ಇಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇನ್ನಿತರರು ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಈ ಸುಂದರ ಕ್ಷಣಕ್ಕೆ ಸಾಕ್ಷಿ ಆಗಲಿದ್ದಾರೆ. ಅಭಿಮಾನಿಗಳು ಈ ಸುಸಂದರ್ಭದಲ್ಲಿ ಮತ್ತೊಮ್ಮೆ ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ.

ಡಾ. ವಿಷ್ಣುವರ್ಧನ್‌ ಜೊತೆಗೆ ಸಾಹಸ ಸಿಂಹ ಬಿರುದು ಸೇರಿಕೊಂಡಿತ್ತು. ಅಭಿಮಾನಿಗಳು ಇಂದಿಗೂ ಸಾಹಸ ಸಿಂಹ ವಿಷ್ಣುವರ್ಧನ್ ಎಂದೇ ಕರೆಯುತ್ತಾರೆ. ಅಭಿಮಾನಿಗಳು ಈ ಬಿರುದನ್ನು ನಟ ವಿಷ್ಣುಗೆ ಕೊಟ್ಟಿದ್ದೇನೋ ನಿಜ. ಆದರೆ ವಿಷ್ಣು ದಾದಾ ಸಿನಿಮಾಗಳಲ್ಲಿ ಸಿಂಹದ ರೀತಿ ಘರ್ಜಿಸುತ್ತಿದ್ದರು ಎನ್ನುವ ಕಾರಣಕ್ಕೆ ಈ ಬಿರುದನ್ನು ಅಭಿಮಾನಿಗಳು ಕೊಟ್ಟಿಲ್ಲವಂತೆ. ಅದಕ್ಕೆ ಅಭಿಮಾನಿಗಳು ಕೊಟ್ಟ 2 ಕಾರಣಗಳು ಏನು? ಎನ್ನುವುದನ್ನು ದಶಕಗಳ ಹಿಂದೆ ಸಂದರ್ಶನವೊಂದರಲ್ಲಿ ಸ್ವತಃ ವಿಷ್ಣುವರ್ಧನ್ ಹಂಚಿಕೊಂಡಿದ್ದರು.

ಹಿರಿಯ ನಟ ಡಾ. ವಿಷ್ಣುವರ್ಧನ್‌ “ಸಾಹಸ ಸಿಂಹ’ ಸಿನಿಮಾದಲ್ಲಿ ನಟಿಸಿದ ಕಾರಣಕ್ಕೆ ಈ ಬಿರುದು ಬಂತು ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ಆದರೆ ಅಂದು ಈ ಬಗ್ಗೆ ನಟ ಹೇಳಿದ್ದು ಏನು ಗೊತ್ತಾ? “ಕದಂಬ” ಸಿನಿಮಾ ಬಿಡುಗಡೆಗೂ ಮುನ್ನ ಡಾ. ವಿಷ್ಣುವರ್ಧನ್ ಕಿರುತೆರೆ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ತಮಗೆ ಸಿಕ್ಕಿದ್ದ ಸಾಹಸಸಿಂಹ ಬಿರುದಿನ ಬಗ್ಗೆ ಮಾತನಾಡಿದ್ದರು. ‘ಕಲಾವಿದರು ಅಭಿಮಾನಿಗಳ ಪಾಲಿಗೆ ಒಂದು ಮಗು ಅಥವಾ ಬೊಂಬೆ ತರಹ. ಅದಕ್ಕೆ ಅಲಂಕಾರಗಳನ್ನು ಮಾಡುತ್ತಾರೆ. ಅಲಂಕಾರ ಮಾಡಿ ಅವರು ಏನು ಬೇಕಾದರೂ ಕರೆಯಬಹುದು. ಆ ಬೊಂಬೆನೋ ಮಗುನೋ ಅವರದ್ದಾದಾಗ ಅವರು ಸಾಹಸ ಸಿಂಹ ಅಂಥಾದರೂ ಕರೆಯಲಿ, ಅಭಿನವ ಭಾರ್ಗವ ಎಂದು ಬೇಕಾದರೂ ಕರೆಯಲಿ. ಎಲ್ಲಾ ಅವರ ಮನಸ್ಸಿನ ಪ್ರೀತಿಯ ಪ್ರಶಂಸೆ’ ಎಂದು ಹೇಳಿದ್ದಾರೆ.

ಸಾಹಸಸಿಂಹ ಎನ್ನುವ ಬಿರುದು ಯಾಕೆ ಎಂದಾಗ ಅಭಿಮಾನಿಗಳು, ‘ಸಿನಿರಂಗದಲ್ಲಿ ನಾನು ಎದುರಿಸಿದ ಸಮಸ್ಯೆಗಳನ್ನು ಬೇರೆ ಯಾರು ಎದುರಿಸಲಿಲ್ಲ. ಆ ವಾತಾವರಣ ಯಾರಿಗೂ ಎದುರಾಗಿರಲಿಲ್ಲ. ಅದನ್ನೆಲ್ಲಾ ಮೀರಿ ನೀವು ಗೆದ್ದಿದ್ದೀರಾ. ಅದು ಬರೀ ಸಿಂಹಕ್ಕೆ ಮಾತ್ರ ಸಾಧ್ಯ. ಅದಕ್ಕಾಗಿ ನಿಮ್ಮನ್ನು ಸಾಹಸಸಿಂಹ ಎಂದು ಕರೆಯುತ್ತೇವೆ ಎಂದಿದ್ದರು. ಅಂದು ಅದನ್ನೆಲ್ಲಾ ಎದುರಿಸಿದ್ದು, ಎದುರಿಸುವಂತಾಗಿದ್ದು, ಎದುರಿಸಿ ಉಳಿಯುವಂತೆ ಆಗಿದ್ದು ನೋಡಿ ಅಭಿಮಾನಿಗಳು ಇದೆಲ್ಲಾ ಸಿಂಹಕ್ಕೆ ಮಾತ್ರ ಸಾಧ್ಯ ಎಂದರು.’ ಎಂದು ಹೇಳಿದರು.

ನಂತರ ಮಾತು ಮುಂದುವರಿಸಿ ಹಿರಿಯ ನಟ ವಿಷ್ಣುವರ್ಧನ್ ಏನು ಹೇಳಿದರು ಅಂದ್ರೆ, ‘ಸರ್ ಇಂಡಸ್ಟ್ರಿಯಲ್ಲಿ ಎಲ್ಲಾ ಕಲಾವಿದರು ನಮಗೆ ಸಿಗ್ತಾರೆ. ಯಾವುದಾದ್ರು ಕಾರ್ಯಕ್ರಮದಲ್ಲಿ ಅಥವಾ ಅಲ್ಲಿ ಇಲ್ಲಿ ಸಿಗುತ್ತಾರೆ. ಆದರೆ ನಿಮ್ಮನ್ನು ಎಲ್ಲೂ ನೋಡಿಲ್ಲ. ರಾಜ್ಯದಲ್ಲಿ 70ರಷ್ಟು ಜನ ನಿಮ್ಮನ್ನು ನೋಡೇಯಿಲ್ಲ. ಯಾಕೆ ನೋಡಲು ಸಿಕ್ಕಿಲ್ಲ ಎಂದು ನೋಡಿದ್ವಿ. ಕಾಡಿಗೆ ಹೋದರೆ ಏನೇನು ಪ್ರಾಣಿ ನೋಡ್ತೀವಿ, ಆನೆ, ಜಿಂಕೆ, ಚಿರತೆ, ಕಾಡೆಮ್ಮೆ ನೋಡಬಹುದು.

ಇದನ್ನೂ ಓದಿ : ಕಷ್ಟಗಳನ್ನೇ ಎದುರಿಸಿ ಬೆಳೆದು ನಿಂತ ನಟ ಡಾ. ವಿಷ್ಣುವರ್ಧನ್‌ ಬಗ್ಗೆ ನಿಮಗೆಷ್ಟು ಗೊತ್ತು ?

ಇದನ್ನೂ ಓದಿ : 3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್ ಎಷ್ಟು ಗೊತ್ತಾ ?

ಇದನ್ನೂ ಓದಿ : ವಿಷ್ಣು ಸ್ಮಾರಕ ಉದ್ಘಾಟನೆ : ಕಟ್ಟಾ ಅಭಿಮಾನಿ ಕಿಚ್ಚ ಸುದೀಪ್‌ನಿಂದ ವಿಶೇಷ ಟ್ವೀಟ್‌

ಆದರೆ ಸಿಂಹ ನೋಡೋಕೆ ಸಿಕ್ತಾ ಅಂದ್ರೆ ಇಲ್ಲ. ಕಾಣಿಸಲ್ಲ ಅದು. ಎಲ್ಲರಿಗೂ ಸಿಗಲ್ಲ ಅದು, ನೀವು ಕೂಡ ಸಿಂಹದ ರೀತಿ ಎಲ್ಲರಿಗೂ ಸಿಗಲ್ಲ. ಅದಕ್ಕೆ ನಾವು ನಿಮ್ಮನ್ನು ಆ ರೀತಿ ಕರೀತಿವಿ ಎಂದರು. ಅಭಿಮಾನಿಗಳ ವಿಶ್ಲೇಷಣೆ ಇಷ್ಟ ಆಯ್ತು. ನನ್ನನ್ನು ಕೇಳಿದ್ರು, ನಾನು ಹೇಳಿದೆ ನೀವು ಹೇಗೆ ಕರೆದರೂ ಚೆಂದ, ಅದನ್ನು ಅನುಭವಿಸುತ್ತೇವೆ’ ಎಂದು ಅಭಿಮಾನಿಗಳ ಜೊತೆಗಿನ ಮಾತುಕತೆಯನ್ನು ವಿಷ್ಣುವರ್ಧನ್ ನೆನಪಿಸಿಕೊಂಡಿದ್ದರು.

Sahasasimha Dr Vishnuvardhan : The movie is not the reason for getting the title “Sahasasimha”: What did actor Vishnuvardhan himself say about this?

Comments are closed.