ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ (Salaar movie)ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಸಿನಿಮಾದ ಒಂದಷ್ಟು ಮೇಕಿಂಗ್ ವಿಡಿಯೋಗಳು, ಫೋಟೊಸ್ ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಅಂತೆಲ್ಲಾ ಗುಸುಗುಸು ಕೇಳಿ ಬರುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುಕೋಟಿ ವೆಚ್ಚದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ‘ಸಲಾರ್’. ಈಗಾಗಲೇ ಸಿನಿಮಾದ ಪೋಸ್ಟರ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸೆಪ್ಟೆಂಬರ್ 28ಕ್ಕೆ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವುದಾಗಿ ಸಿನಿತಂಡ ಘೋಷಿಸಿದೆ.
ಕೆಜಿಎಫ್, ಕಾಂತಾರ ಸಿನಿಮಾಗಳನ್ನು ನಿರ್ಮಿಸಿದ ಕನ್ನಡದ ಹೆಮ್ಮೆಯ ಹೊಂಬಾಳೆ ಸಂಸ್ಥೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ. ಈ ಸಿನಿಮಾದಲ್ಲಿ ಶೃತಿ ಹಾಸನ್ ನಾಯಕಿಯಾಗಿ ನಟಿಸಿದ್ದು ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಸಿನಿಮಾದಲ್ಲಿದೆ. ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. “ಸಲಾರ್” ಸಿನಿಮಾಕ್ಕೆ ಸೊರಿಕೆ ಕಾಟ ತಪ್ಪುತ್ತಲೇ ಇಲ್ಲ. ಶೂಟಿಂಗ್ ಸೆಟ್‌ನಿಂದ ಫೋಟೊಗಳು, ವಿಡಿಯೋಗಳು ಲೀಕ್ ಆಗುತ್ತಲೇ ಇದೆ. ಇದೀಗ ಮತ್ತೊಮ್ಮೆ ಅಂತದ್ದೇ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿ ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಕಥೆಯನ್ನು ಊಹಿಸಿಕೊಳ್ಳುತ್ತಿದ್ದಾರೆ.
ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಮದರ್ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ. ‘ಉಗ್ರಂ’ ಸಿನಿಮಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಗಳನ್ನು ನೋಡಿ ದಿಕ್ಕು ತೋಚದೇ ಕುಳಿತ ತಾಯಿ ಮುಂದೆ ಅಗಸ್ತ್ಯ ಧೈರ್ಯ ತುಂಬಿ ಕಿಡಿಗೇಡಿಗಳ ಬೆಂಡೆತ್ತುವ ದೃಶ್ಯ ಇದೆ. ಇನ್ನು ಕೆಜಿಎಫ್ ಸಿನಿಮಾದಲ್ಲಿ ತಾಯಿಯೊಬ್ಬಳು ಮಗುವಿಗಾಗಿ ಬನ್ ಒಂದನ್ನು ಹಿಡಿದು ಬರುವಾಗ ಅದು ರಸ್ತೆಗೆ ಬಿದ್ದ ಸಮಯದಲ್ಲಿ ಅದನ್ನು ಮರಳಿ ತೆಗೆದುಕೊಳ್ಳಲು ಮುಜುಗರ ಪಡುತ್ತಿದ್ದ ತಾಯಿಯನ್ನು ನೋಡಿದ ರಾಕಿ ಕಾರ್ ಅಡ್ಡಗಟ್ಟಿ ಬನ್ ಕೊಟ್ಟು ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ ಎಂದು ಹೇಳ್ತಾನೆ. ಇಂತದ್ದೇ ತಾಯಿ ಮಗನ ಸನ್ನಿವೇಶ ‘ಸಲಾರ್’ ಸಿನಿಮಾದಲ್ಲಿ ಇದ್ದಂತೆ ಕಾಣುತ್ತಿದೆ.
‘ಸಲಾರ್’ ಸಿನಿಮಾದಲ್ಲಿ ಈಶ್ವರಿ ರಾವ್ ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ. ಸದ್ಯ ಲೀಕ್ ಆಗಿರುವ ವಿಡಿಯೋದಲ್ಲಿ ಪ್ರಭಾಸ್, ಈಶ್ವರಿ ರಾವ್ ಎದುರು ಕುಳಿತು ಮಾತನಾಡುವಂತಹ ಸನ್ನಿವೇಶ ಇದೆ. ಸದ್ಯ ‘ಉಗ್ರಂ’, ‘ಕೆಜಿಎಫ್’ ಹಾಗೂ ‘ಸಲಾರ್’ ಸಿನಿಮಾದ ಲೀಕ್ಡ್ ವಿಡಿಯೋ ಸ್ಕ್ರೀನ್ ಶಾಟ್ ತೆಗೆದು ಮೂರರಲ್ಲೂ ಒಂದೇ ತರಹದ ಸನ್ನಿವೇಶ ಎಂದು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ ‘ಸಲಾರ್’ ಮದರ್ ಸೆಂಟಿಮೆಂಟ್ ಹೈಲೆಟ್ ಆಗುತ್ತೆ ಎಂದು ಹೇಳುತ್ತಿದ್ದಾರೆ. ಇನ್ನು ಕಳೆದೆರಡು ದಿನಗಳಿಂದ ಯಶ್ ಶೂಟಿಂಗ್ ಸೆಟ್‌ನಲ್ಲಿ ಇರುವಂತಹ ಫೋಟೊವೊಂದು ವೈರಲ್ ಆಗ್ತಿದೆ.
ಅದರಲ್ಲಿ ಯಶ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದು ‘ಸಲಾರ್’ ಸಿನಿಮಾದ ಮೇಕಿಂಗ್ ಸ್ಟಿಲ್ ಎಂದು ಕೆಲವರು ಹೇಳುತ್ತಿದ್ದಾರೆ. ಬಹಳ ದಿನಗಳಿಂದ ಯಶ್ ಕೂಡ ಸಲಾರ್ ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದಕ್ಕೆ ಈ ಫೋಟೊವನ್ನು ಸೇರಿಸಿ ಶೇರ್ ಮಾಡುತ್ತಿದ್ದಾರೆ. ಆದರೆ ಇದು ಯಾವುದೇ ಜಾಹೀರಾತು ಚಿತ್ರೀಕರಣದ ಫೋಟೊ ಎನ್ನುವುದು ಕೆಲವರ ವಾದ. ಪೆಪ್ಸಿ ಇಂಡಿಯಾ ಜಾಹೀರಾತಿನ ಮೇಕಿಂಗ್ ಸ್ಟಿಲ್ ಆಗಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.
ಇದನ್ನೂ ಓದಿ : ಟ್ರೋಲ್ ಮಾಡುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ರಶ್ಮಿಕಾ ಮಂದಣ್ಣ
ಇದನ್ನೂ ಓದಿ : ನಟ ದರ್ಶನ್ ಅಭಿನಯದ “ಕ್ರಾಂತಿ” ಸಿನಿಮಾಕ್ಕೆ ಶುಭ ಕೋರಿದ ಸೆಲೆಬ್ರೆಟಿಗಳು
ಇದನ್ನೂ ಓದಿ : ಕ್ರಾಂತಿ ಸಿನಿಮಾಕ್ಕೂ ತಪ್ಪದ ಪೈರಸಿ ಕಾಟ
ಆಕ್ಷನ್ ಎಂಟರ್‌ಟೈನರ್ ಸಿನಿಮಾಗಳನ್ನು ಮಾಡುವುದರಲ್ಲಿ ಪ್ರಶಾಂತ್ ನೀಲ್ ಮಾಸ್ಟರ್. ಈಗಾಗಲೇ 3 ಸಿನಿಮಾಗಳಲ್ಲಿ ಅವರ ಎಲಿವೇಷನ್ ಸೀನ್ಸ್ ನೋಡಿದವರು ದಂಗಾಗಿದ್ದಾರೆ. ‘ಸಲಾರ್’ ಸಿನಿಮಾದಲ್ಲಿ ಇದನ್ನೆಲ್ಲಾ ಮೀರಿದಂತೆ ಎಂಟರ್‌ಟೈನ್‌ಮೆಂಟ್ ಫಿಕ್ಸ್ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ರಾಕಿ ಭಾಯ್ ಕ್ಯಾರೆಕ್ಟರೈಷೇನ್ ನೋಡಿದ ಮೇಲೆ ‘ಸಲಾರ್’ ಆರ್ಭಟ ಹೇಗಿರುತ್ತೋ ಎಂದು ಊಹಿಸಿಕೊಂಡೇ ಪ್ರಭಾಸ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಲಿದೆ.
Salaar movie : Rakibhai entry to “Salar” arena? The making video went viral