ಚಿಕ್ಕಮಗಳೂರು : ಸ್ಯಾಂಡಲ್ ವುಡ್ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ತಮ್ಮ ಹುಟ್ಟೂರಲ್ಲೇ ಮಣ್ಣಲ್ಲಿ ಮಣ್ಣಾಗಿದ್ದಾರೆ. ವೀರಶೈವ ಲಿಂಗಾಯಿತ ಧರ್ಮದ ವಿಧಿ ವಿಧಾನಗಳಂತೆಯೇ ಅಂತ್ಯಕ್ರೀಯೆ ನೆರವೇರಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿರುವ ಸಂಚಾರಿ ವಿಜಯ ಅವರ ಬಾಲ್ಯದ ಸ್ನೇಹಿತ ರಘು ಅವರ ತೋಟದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಕಪ್ಪೂರು ಶ್ರೀಗಳ ನೇತೃತ್ವದಲ್ಲಿ ಮೂವರ ಮಠಾಧೀಶರ ಸಮ್ಮುಖದಲ್ಲಿ ವಿಜಯ್ ಸಹೋದರನಿಂದ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದ್ದಾರೆ.

ಸಂಚಾರಿ ವಿಜಯ್ ಹುಟ್ಟಿ ಬೆಳೆದ ಪಂಚನಹಳ್ಳಿಯೇ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರೀಯೆಯನ್ನು ನೆಡೆಸಲಾಗಿದೆ. ಆರಂಭದಲ್ಲಿ ಬೆಂಗಳೂರಲ್ಲಿಯೇ ಅಂತ್ಯಕ್ರೀಯೆ ನಡೆಸಲು ಸಿದ್ದತೆ ನಡೆಸಲಾಗಿತ್ತಾದರೂ, ವಿಜಯ್ ಹುಟ್ಟೂರ ಜನರ ಒತ್ತಡಕ್ಕೆ ಮಣಿದು ಪಂಚನಹಳ್ಳಿಯಲ್ಲಿಯೇ ಅಂತ್ಯಕ್ರೀಯೆಯನ್ನು ನೆರವೇರಿಸಲಾಗಿದೆ. ಕೊರೊನಾ ಸೋಂಕಿನ ಭೀತಿಯ ನಡುವಲ್ಲೇ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ಮಾತ್ರವಲ್ಲ ಗ್ರಾಮದ ತುಂಬೆಲ್ಲಾ ಸೂತಕದ ಛಾಯೆ ಆವರಿಸಿದೆ.

ಸ್ನೇಹಿತ ನವೀನ್ ಜೊತೆಗೆ ಸಂಚಾರಿ ವಿಜಯ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದಾಗಿ ವಿಜಯ್ ತಲೆಗೆ ಗಂಭೀರವಾದ ಗಾಯವಾಗಿತ್ತು. ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಆದ್ರೆ ವಿಜಯ್ ಬದುಕೋದಿಲ್ಲಾ ಅಂತ ತಿಳಿಯುತ್ತಲೇ ವಿಜಯ್ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ವಿಜಯ್ ಕಿಡ್ನಿ, ಲಿವರ್ ಜೊತೆಗೆ ಕಣ್ಣನ್ನು ದಾನ ಮಾಡುವ ಮೂಲಕ ಇತರರ ಕಣ್ಣು ತೆರೆಯಿಸಿದ್ದಾರೆ.