ಸ್ಯಾಂಡಲ್ ವುಡ್ ಸಿನಿತಾರೆಯರೆಲ್ಲ ನಟನೆಯ ಜೊತೆಗೆ ಕೃಷಿಯತ್ತ ಮುಖಮಾಡುತ್ತಿದ್ದಾರೆ. ಉಪೇಂದ್ರ್, ಯಶ್, ಕಿಶೋರ್ ಸೇರಿದಂತೆ ಹಲವು ತಾರೆಯರು ಕೃಷಿಗೆ ಮನಸೋತಿದ್ದರೇ, ನಟಿ ಅದಿತಿ ಪ್ರಭುದೇವ ಕೂಡ ಮಣ್ಣಿನಲ್ಲೇ ತಮ್ಮ ಬಿಡುವಿನ ಸಮಯ ಕಳೆಯುವ ಮೂಲಕ ತಮ್ಮ ಕನಸಿನ ತೋಟವನ್ನು ನನಸು ಮಾಡುವುದರಲ್ಲಿ ಬ್ಯುಸಿಯಾಗಿದ್ದಾರಂತೆ.

ಕೃಷಿ ಹಿನ್ನೆಲೆಯಿಂದ ಬಂದು ಬೆಳ್ಳಿತೆರೆಯಲ್ಲಿ ಮಿಂಚಿದ ನಟಿ ಅದಿತಿಪ್ರಭುದೇವ್, ಸದ್ಯ ದಿಲ್ ಮಾರ್, ತೋತಾಪುರಿ ಸೇರಿದಂತೆ ಹಲವು ಕನ್ನಡ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಂಡಿರೋದರಿಂದ ಅದಿತಿ ತಮ್ಮ ಹುಟ್ಟೂರಿನ ಕೃಷಿಭೂಮಿಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತ, ಮಣ್ಣಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾವು ಕೃಷಿಭೂಮಿಯಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿರುವ ಅದಿತಿ ಪ್ರಭುದೇವ, ಎಲ್ಲರಿಗೂ ನಮಸ್ಕಾರ. ಪ್ರಕೃತಿ ಜೊತೆಗಿನ ನಂಟು ಮನುಷ್ಯನಿಗೆ ನೆಮ್ಮದಿ ತರುತ್ತದೆ. ನಾನು ಆಯ್ಕೆಮಾಡಿಕೊಂಡ ವೃತ್ತಿ ನನ್ನ ಮೂಲ ಬದುಕಿಗಿಂತ ಭಿನ್ನವಾಗಿದ್ದರೂ ಕೃಷಿ ನನ್ನ ಮೊದಲ ಆಯ್ಕೆ.

ನನ್ನದೇ ಆದ ಪುಟ್ಟ ತೋಟವೊಂದನ್ನು ಮಾಡುವ ಕನಸಿದೆ. ಆ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಕೃಷಿ ತರುವ ಜೀವನ ನೆಮ್ಮದಿ ಅನುಭವಿಸಿದವರಿಗೆ ಮಾತ್ರ ಗೊತ್ತು.

ಮೈತುಂಬ ಸಾಲವಿದ್ದರೂ ಜನರಿಗೆ ಅನ್ನ ಉಣಿಸುವ ರೈತನಿಗೆ ನನ್ನ ಈ ವಿಡಿಯೋ ಅರ್ಪಣೆ ಎಂದು ಅದಿತಿ ಬರೆದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅದಿತಿ ತಾವು ಜಮೀನಿನಲ್ಲಿ ಕೆಲಸ ಮಾಡುವ ಪೋಟೋಗಳನ್ನು ಕೂಡ ಹಂಚಿಕೊಂಡಿದ್ದರು.ಅದಿತಿ ಕೃಷಿಯಲ್ಲಿ ತೊಡಗಿರುವ ಪೋಟೋ, ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಥಳುಕು-ಬಳುಕು ಇಲ್ಲದ ರಿಯಲ್ ಕನ್ನಡತಿ ಅಂತ ಅದಿತಿಯವರನ್ನು ಹೊಗಳುತ್ತಿದ್ದಾರೆ.