ಒಂದಿಷ್ಟು ದಿನಗಳಿಂದ ತಣ್ಣಗಾಗಿದ್ದ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಎಫ್.ಎಸ್.ಎಲ್ ವರದಿಯಲ್ಲಿ ಪ್ರಕರಣದ ಪ್ರಮುಖ ಆರೋಪಿತರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ವಿರೇನ್ ಖನ್ನಾ ಡ್ರಗ್ಸ್ ಸೇವನೆ ಸಾಬೀತಾಗುತ್ತಿದ್ದಂತೆ ನಟಿ ಸಂಜನಾ ವರಸೆ ಬದಲಿಸಿದ್ದು, ತಾವು ಆರೋಗ್ಯ ಸಮಸ್ಯೆಯ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದ ಸಂಗತಿ ಹೈಲೈಟ್ ಮಾಡೋ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡೋ ಸರ್ಕಸ್ ಆರಂಭಿಸಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಪಾಸಿಟಿವ್ ಬರುತ್ತಿದ್ದಂತೆ ಸಂಜನಾ ಉಲ್ಟಾ ಹೊಡೆದಿದ್ದಾರೆ. ತಮ್ಮ ಅನಾರೋಗ್ಯವನ್ನೇ ಹೈಲೈಟ್ ಮಾಡಿರೋ ಸಂಜನಾ ನಾನು ಪ್ರತಿನಿತ್ಯ ನೋವು ನಿವಾರಕ ಸೇರಿ ವಿವಿಧ ಸಮಸ್ಯೆಗೆ ಒಟ್ಟು 16 ಮಾತ್ರೆ ತೆಗೆದುಕೊಳ್ಳುತ್ತಿದ್ದೆ ಎಂದಿದ್ದಾರೆ. ಆ ಮೂಲಕ ಡ್ರಗ್ಸ್ ಸೇವನೆ ಸಾಬೀತಾಗಿರುವುದು ತಮ್ಮ ನೋವುನಿವಾರಕ ಮಾತ್ರೆಗಳ ಪರಿಣಾಮದಿಂದ ಎಂಬ ಭಾವನೆ ಮೂಡಿಸುವ ಪ್ರಯತ್ನ ನಡೆಸಿದಂತಿದೆ.

ಪ್ರಕರಣ ಶುರುವಾದಾಗಿನಿಂದ ನಾನು ನಿದ್ರಾಹೀನತೆಯಿಂದ ಬಳಲುತ್ತಿದ್ದೆ. ಹೀಗಾಗಿ ನಿದ್ರಾಹೀನತೆ ಹಾಗೂ ಮಾನಸಿಕ ತೊಂದರೆಗೆ ವೈದ್ಯರನ್ನು ಭೇಟಿ ಮಾಡಿದ್ದೆ. ಅವರ ಸಲಹೆ ಮೇರೆಗೆ ಗುಳಿಗೆ ತೆಗೆದುಕೊಳ್ಳುತ್ತಿದೆ. ಕೇಸ್ ನಿಂದಾಗಿ ಜೈಲು ಸೇರಿ ಹೊರಬಂದ ಬಳಿಕ ಶಸ್ತ್ರಚಿಕಿತ್ಸೆ ನಡೆಯಿತು ಎಂದಿದ್ದಾರೆ.
ಅಲ್ಲದೇ, ಅಳು ನಿಲ್ಲಿಸುವುದಕ್ಕಾಗಿ ಹಾಗೂ ನಿದ್ರೆ ಬರಲಿ ಎಂದು ನನಗೆ ಮೂಡ್ ಎಲಿವೇಟರ್ ಗಳನ್ನು ನೀಡಿದ್ದರು. ಮೂರು ತಿಂಗಳ ಕಾಲ ನಾನು ಪ್ರತಿದಿನ ಅಳುತ್ತಿದ್ದೆ. ವಿವಿಧ ಕೆಮಿಕಲ್ ಹೊಂದಿದ ಮಾತ್ರೆಗಳನ್ನು ನಾನು ಸೇವಿಸಿರುವುದಕ್ಕೆ ನನ್ನ ಹತ್ರ ದಾಖಲೆಗಳಿದೆ. ಜನ ಏನೇ ಹೇಳಿದರೂ ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದಿದ್ದಾರೆ.
ಇದಲ್ಲದೇ ಇನ್ನೂ ಹಲವು ವಿಚಾರವನ್ನು ಸಂಜನಾ ಗಲ್ರಾನಿ ತಮ್ಮ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಸಂಜನಾ ಹಾಗೂ ರಾಗಿಣಿ ತಲೆಕೂದಲನ್ನು ಟೆಸ್ಟ್ ಗೆ ಕಳುಹಿಸಲಾಗಿದ್ದು, ಇಬ್ಬರ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ.