ನಿನ್ನೆಯಷ್ಟೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಹುಭಾಷಾ ನಟ ಸುದೀಪ್ ಶುಕ್ರವಾರ ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಸುದೀಪ್ ಗೆ ಪತ್ನಿ ಪ್ರಿಯಾ ಸಾಥ್ ನೀಡಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸುದೀಪ್ ಬೆಳಗ್ಗೆಯೇ ಮೈಸೂರಿಗೆ ತೆರಳಿದ್ದು, ಮೊದಲು ಚಾಮುಂಡೇಶ್ವರಿ ದೇವಿ ದರ್ಶನ ಪಡೆದಿದ್ದಾರೆ. ಸುದೀಪ್ ಆಗಮನದ ಸುದ್ದಿ ತಿಳಿದ ಸಾವಿರಾರು ಅಭಿಮಾನಿಗಳು ದೇವಾಲಯದ ಬಳಿ ನೆರೆದಿದ್ದರು. ಅಭಿಮಾನಿಗಳತ್ತ ಕೈ ಬೀಸಿದ ಸುದೀಪ್ ಬಳಿಕ ಹೂಮುತ್ತನಿತ್ತು ಸಂಭ್ರಮಿಸಿದ್ದಾರೆ.

ಚಾಮುಂಡೇಶ್ವರಿ ದರ್ಶನದ ಬಳಿಕ ಸುದೀಪ್, ಚಾಮರಾಜನಗರದ ಗೌಡಗೆರೆಯಲ್ಲಿರೋ 68 ಅಡಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದಿದ್ದಾರೆ. ಬಳಿಕ ಸಾತನೂರಿನ ಸಮೀಪದಲ್ಲಿರುವ ಕಬ್ಬಾಳಮ್ಮ ದೇವಿ ದೇವಾಲಯಕ್ಕೂ ತೆರಳಿದ ಸುದೀಪ್ ಅಲ್ಲಿಯೂ ಪೂಜೆ ಸಲ್ಲಿಸಿದ್ದಾರೆ.
ಎಲ್ಲೆಡೆಯೂ ಸುದೀಪ್ ಗೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದು, ನೆಚ್ಚಿನ ನಟನೊಂದಿಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಸುದೀಪ್ ಹುಟ್ಟುಹಬ್ಬಕ್ಕೆ ವಿಕ್ರಾಂತ್ ರೋಣ ತಂಡ ಟೀಸರ್ ರಿಲೀಸ್ ಮಾಡಿದ್ದರೇ, ಸುದೀಪ್ ಸಿನಿಮಾ ಕೋಟಿಗೊಬ್ಬ-3 ದಸರಾ ವೇಳೆ ಬಿಡುಗಡೆಯಾಗೋ ಸಾಧ್ಯತೆ ಇದೆ.
Actor sudeep visited mysore chamundeshwari temple.