ಕನ್ನಡದ ಪವರ್ ಸ್ಟಾರ್ ಅಗಲಿಕೆ ಅಭಿಮಾನಿಗಳ ಶೋಕಕ್ಕೆ ಕೊನೆಯಿಲ್ಲದಂತೆ ಮಾಡಿದೆ. ಅಪ್ಪು ಅಗಲಿ ವಾರ ಕಳೆಯುವ ಮುನ್ನವೇ ಅಭಿಮಾನಿಗಳು ನಗರದಲ್ಲಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಸಿದ್ಧವಾಗಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಂಘವು ಬಿಬಿಎಂಪಿ ಆವರಣದಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆ ನಿರ್ಮಿಸುವಂತೆ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಮನವಿ ಮಾಡಿದೆ.

ಅಲ್ಲದೇ ಬಿಬಿಎಂಪಿ ಆಡಳಿತ ಹಾಗೂ ಸರ್ಕಾರ ಅನುಮತಿ ಕೊಟ್ಟರೇ ಒಂದು ತಿಂಗಳಿನಲ್ಲೇ ಡಾ.ರಾಜ್ ಪ್ರತಿಮೆ ಪಕ್ಕದಲ್ಲೇ ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪ್ರತಿಮೆ ನಿರ್ಮಿಸಲು ಬಿಬಿಎಂಪಿ ನೌಕರರ ಸಂಘ ಸಿದ್ಧವಾಗಿದೆ.

ಈ ಬಗ್ಗೆ ವಿವರಣೆ ನೀಡಿರುವ ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷ ಅಮೃತ್ ರಾಜ್ ಆಯುಕ್ತರು ಅನುಮತಿ ನೀಡಿದರೇ ಇದೇ ತಿಂಗಳಿನಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಸುತ್ತೇವೆ ಎಂದಿದ್ದಾರೆ.

ಇನ್ನು ನೌಕರರ ಸಂಘದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಆಯುಕ್ತ ಗೌರವ ಗುಪ್ತಾ, ಡಾ.ರಾಜ್ ಪ್ರತಿಮೆ ಪಕ್ಕದಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆ ನಿರ್ಮಾಣದ ಬೇಡಿಕೆ ಕುರಿತು ಕಾನೂನು ಚೌಕಟ್ಟಿನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಒಟ್ಟಿನಲ್ಲಿ ಇನ್ನಷ್ಟು ಕಾಲ ಅಭಿಮಾನಿಗಳನ್ನು ತೆರೆಮೇಲೆ ರಂಜಿಸಬೇಕಿದ್ದ ಪುನೀತ್ ರಾಜ್ ಕುಮಾರ್‌ತೆರೆಮರೆಗೆ ಸರಿದಿದ್ದು ಅಭಿಮಾನಿಗಳು ಪ್ರತಿಮೆ, ಸ್ಮಾರಕದ ಮೂಲಕ ತಮ್ಮ ಅಭಿಮಾನ ಮೆರೆಯುವ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ : ಪುನೀತ್ ಗಾಗಿ ಮಿಡಿದ ಪ್ರಣೀತಾ : ಕನ್ನಡತಿ ಮಾಡಿದ್ದಾರೆ ಒಂದೊಳ್ಳೆ ಕೆಲಸ
ಇದನ್ನೂ ಓದಿ : ಅಪ್ಪು ನಿಧನಕ್ಕೂ ಮುನ್ನ ನಡೆದಿದ್ದೇನು ? ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಸತ್ಯ
( The statue of Puneeth Raj Kumar will be built in the Bangalore City )