ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದೆ. ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪಿದ ಖ್ಯಾತ ನಟನ ಸಾವಿಗೂ ಡ್ರಗ್ಸ್ ಮಾಫಿಯಾ ಕಾರಣವಾಯ್ತಾ ? ಆ ನಟನ ಪೋಸ್ಟ್ ಮಾರ್ಟಮ್ ಯಾಕೆ ಮಾಡಲಿಲ್ಲ. ರಾಜಕಾರಣಿಗಳ ಮಕ್ಕಳು ಮಾತ್ರವಲ್ಲ ಸ್ಯಾಂಡಲ್ ವುಡ್ ನ ಯುವ ನಟ, ನಟಿಯರಿಗೂ ಡ್ರಗ್ಸ್ ಮಾಫಿಯಾದ ನಂಟಿದೆ ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಸ್ಪೋಟಕ ಮಾಹಿತಿ ನೀಡಿದ್ದಾರೆ.

ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್ ಅನಿಕಾ ಬಂಧನದ ಬೆನ್ನಲ್ಲೇ ಸ್ಯಾಂಡಲ್ ವುಡ್ ಹಾಗೂ ಡ್ರಗ್ಸ್ ಮಾಫಿಯಾ ನಡುವಿನ ನಂಟು ಬಯಲಾಗುತ್ತಿದೆ. ಈಗಾಗಲೇ ಡ್ರಗ್ಸ್ ದಂಧೆಯ ಜಾಡು ಹಿಡಿದಿರುವ ಎನ್ ಸಿಬಿ ಆರೋಪಿಗಳಿಂದ ಮಾಹಿತಿಯನ್ನು ಕಲೆ ಹಾಕುತ್ತಿದೆ. ಅಲ್ಲದೇ ತನಿಖೆಯ ವೇಳೆಯಲ್ಲಿ ಸ್ಯಾಂಡಲ್ ವುಡ್ ನಟ, ನಟಿಯರಿಗೂ ಕೂಡ ತಾವು ಡ್ರಗ್ಸ್ ಸಪ್ಲೈ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಸುಮಾರು 4 ಪುಟಗಳಷ್ಟು ಹೆಸರುಗಳನ್ನು ಆರೋಪಿಗಳು ನೀಡಿದ್ದಾರೆಂದು ತಿಳಿದುಬಂದಿದೆ.

ಈ ನಡುವಲ್ಲೇ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ಯಾಂಡಲ್ ವುಡ್ ಮಂದಿ ಬೆಚ್ಚಿ ಬೀಳುವ ಆರೋಪವನ್ನು ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಹಲವು ವರ್ಷಗಳಿಂದಲೂ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ. ಯುವ ನಟ, ನಟಿಯರು, ಡ್ರಗ್ಸ್ ಮಾಫಿಯಾಕ್ಕೆ ಸಿಲುಕಿದ್ದಾರೆ. ಹಲವರು ನಟ, ನಟಿಯರು ರಾತ್ರೋ ರಾತ್ರಿ ಅಪಾರ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಿದ್ದು, ದುಬಾರಿ ಬೆಲೆಯ ಜಾಗ್ವಾರ್, ಆಡಿ ಕಾರುಗಳಲ್ಲಿ ಓಡಾಡುತ್ತಿದ್ದಾರೆ.

ಅಷ್ಟೇ ಅಲ್ಲಾ ಯುವ ನಟ, ನಟಿಯರು ಡ್ರಗ್ಸ್ ಸೇವನೆ ಮಾಡಿ ಸಿನಿಮಾ ಸೆಟ್ ಗೆ ಹಾಜರಾಗುತ್ತಿದ್ದಾರೆ. ತಡರಾತ್ರಿಯ ವರೆಗೆ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡುತ್ತಿದ್ದಾರೆ. ರೆಸಾರ್ಟ್, ಹೋಟೆಲ್, ರಾಜಕಾರಣಿಗಳ ಮನೆಯಲ್ಲಿ ಡ್ರಗ್ಸ್ ಪಾರ್ಟಿ ಎಗ್ಗಿಲ್ಲದೇ ನಡೆಯುತ್ತಿದೆ. ಸ್ಟಾರ್ ನಟರ ಮಕ್ಕಳು, ರಾಜಕಾರಣಿಗಳ ಮಕ್ಕಳು, ನಿರ್ದೇಶಕರು, ನಿರ್ದೇಶಕರ ಮಕ್ಕಳು ಕೂಡ ಡ್ರಗ್ಸ್ ದಂಧೆಗೆ ಬೆಂಬಲವಾಗಿ ನಿಂತಿದ್ದಾರೆ ಅಂತಾ ಆರೋಪಿಸಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಸಾವನ್ನಪ್ಪಿದ್ದ ಕನ್ನಡದ ನಟನ ಸಾವಿಗೂ ಡ್ರಗ್ಸ್ ಮಾಫಿಯಾಕ್ಕೂ ನಂಟಿದೆ. ಆ ನಟ ಹೃದಯಾಘಾತದಿಂದ ಸಾವನ್ನಪ್ಪಿದ್ದರೂ ಕೂಡ ನಟ ಮರಣೋತ್ತರ ಪರೀಕ್ಷೆಯನ್ನು ನಡೆಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ್ರೆ ಡ್ರಗ್ಸ್ ಮಾಫಿಯಾ ಬಯಲಾಗುತ್ತೆ ಅನ್ನೋ ಕಾರಣದಿಂದಲೇ ರಾಜಕಾರಣಿಗಳು ಸೇರಿದಂತೆ ಪ್ರಕಣವನ್ನು ಮುಚ್ಚಿ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದವರ ಹೆಸರುಗಳನ್ನು ಬಹಿರಂಗ ಪಡಿಸಬೇಕು. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದಂತೆ ಕೆಲಸ ಮಾಡಬೇಕು. ಇನ್ನು ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾದ ವಿರುದ್ದ ಹಿರಿಯ ನಟರು ಕೂಡ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ನಟ, ನಟಿಯರಿಂದ ಇಡೀ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.