ಬರ್ತಡೇಗೆ ದುಬಾರಿ ಗಿಫ್ಟ್ ಹೆಸರಲ್ಲಿ ಫೇಸ್ಬುಕ್ ಗೆಳತಿಯ ವಂಚನೆ : 3.5 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡ ಉಡುಪಿಯ ವ್ಯಕ್ತಿ !

0

ಉಡುಪಿ : ಅವರಿಬ್ಬರಿಗೂ ಫೇಸ್ ಬುಕ್ ನಲ್ಲಿ ಪರಿಚಯವಾಗಿತ್ತು. ಗೆಳೆಯ ಬರ್ತಡೇಗೆ ದುಬಾರಿ ಗಿಫ್ಟ್ ಕಳುಹಿಸಿಕೊಡುವುದಾಗಿ ಹೇಳಿದ ಫಾರಿನ್ ಗೆಳತಿ ಬರೋಬ್ಬರಿ 3.5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾಳೆ. ಗಿಫ್ಟ್ ಆಸೆಗೆ ಬಲಿಬಿದ್ದ ಉಡುಪಿಯ ವ್ಯಕ್ತಿ ಇದೀಗ ಹಣವನ್ನೂ ಕಳೆದುಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಉಡುಪಿ ಜಿಲ್ಲೆಯ ಪಡುಬಿದ್ರಿಯ ನಾಡ್ಪಾಲ್ ಗ್ರಾಮದ 53 ವರ್ಷ ವ್ಯಕ್ತಿ ಇದೀಗ ಫೇಸ್ಬುಕ್ ಗೆಳತಿಯಿಂದ ಮೋಸ ಹೋದವರು. ಮೂಲ್ಕಿಯ ಪ್ರತಿಷ್ಠಿತ ಕಂಪೆನಿಯೊಂದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಿತ್ಯವೂ ಫೇಸ್ ಬುಕ್ ಬಳಸುತ್ತಿದ್ದರು.

ವ್ಯಕ್ತಿಗೆ ಕಳೆದ ಒಂದು ವಾರದ ಹಿಂದೆಯಷ್ಟೇ  ಫೇಸ್ ಬುಕ್ ನಲ್ಲಿ ಜೊನ್ ಶರ್ರಿ ಮಾಕ್ಸ್ ವೆಲ್ ಎಂಬಾಕೆಯ ಪರಿಚಯವಾಗಿತ್ತು. ವ್ಯಕ್ತಿಯ ಹುಟ್ಟು ಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ಕಳುಹಿಸುವುದಾಗಿ ಹೇಳಿದ್ದ ಮಹಿಳೆ ವ್ಯಕ್ತಿಗೆ ಆಮಿಷವೊಡ್ಡಿದ್ದಾಳೆ.

ಇದಾದ ಬೆನ್ನಲ್ಲೇ ಮಹಿಳೆಯೋರ್ವಳು ವ್ಯಕ್ತಿಗೆ ಕರೆ ಮಾಡಿ ನಿಮಗೆ ವಿದೇಶದಿಂದ ಪಾರ್ಸೆಲ್ ಬಂದೆ ಎಂದು ಹೇಳಿದ್ದಾಳೆ. ಬ್ಯಾಂಕ್ ಖಾತೆಯ ವಿವರವನ್ನು ನೀಡಿ ಕಸ್ಟಮ್ ಚಾರ್ಜ 58 ಸಾವಿರ ರೂಪಾಯಿ ಪಾವತಿ ಮಾಡುವಂತೆ ಹೇಳಿದ್ದಾಳೆ. ಮಹಿಳೆಯ ಮಾತನ್ನು ನಂಬಿದ ವ್ಯಕ್ತಿ ಹಣವನ್ನು ಮಹಿಳೆ ನೀಡಿದ ಖಾತೆಗೆ ಜಮಾ ಮಾಡಿದ್ದರು.

ಹಣ ಜಮೆಯಾದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ತಾನೆಂದು ಹೇಳಿ ಕರೆ ಮಾಡಿದ್ದಾಳೆ. ಆಕೆಯೂ ಬ್ಯಾಂಕ್ ಖಾತೆಯ ವಿವರ ನೀಡಿ 2.95 ಲಕ್ಷ ರೂಪಾಯಿ ಪಾವತಿ ಮಾಡುವಂತೆ ಹೇಳಿದ್ದಾರೆ. ದುಬಾರಿ ಗಿಫ್ಟ್ ಆಸೆಗೆ ಬಲಿಬಿದ್ದ ವ್ಯಕ್ತಿ ಒಟ್ಟು 3.5 ಲಕ್ಷ ರೂಪಾಯಿ ಪಾವತಿ ಮಾಡಿದ್ದಾರೆ.

ಕೊನೆಗೆ ಹಣ ಪಾವತಿ ಮಾಡಿದ ಬೆನ್ನಲ್ಲೇ ತಾನು ಮೋಸ ಹೋಗಿರುವುದು ವ್ಯಕ್ತಿಗೆ ತಿಳಿದಿದೆ. ಫೇಸ್ಬುಕ್ ಗೆಳತಿಯನ್ನು ಸಂಪರ್ಕ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಕೂಡ ವಂಚನೆಗೆ ಒಳಗಾಗುತ್ತಿರುವ ಮಾತ್ರ ದುರಂತವೇ ಸರಿ.

Leave A Reply

Your email address will not be published.