- ಪೂರ್ಣಿಮಾ ಹೆಗಡೆ
ಸಿಲ್ಕ್ ಸ್ಮಿತಾ.. ಒಂದು ಕಾಲದಲ್ಲಿ ಪಡ್ಡೆಗಳ ಎದೆಬಡಿತ ಹೆಚ್ಚಿಸುತ್ತಿದ್ದ ನಟಿ. ಬಹುಕಾಲ ಸಿನಿಕ್ಷೇತ್ರದಲ್ಲಿ ಉಳಿಯದಿದ್ದರೂ ತಮ್ಮ ಮಾದಕ ಮೈಮಾಟ ಹಾಗೂ ಮತ್ತೇರಿಸುವ ನೃತ್ಯದಿಂದಲೇ ಮನೆಮಾತಾದವರು. ಇಂಥ ಸಿಲ್ಕ್ ಸ್ಮಿತಾ ಮತ್ತೊಮ್ಮೆ ತೆರೆಗೆ ಬರಲಿದ್ದಾರೆ.

ಕೌಟುಂಬಿಕ ಸಮಸ್ಯೆಯಿಂದ ಬದುಕಿಗೆ ಅಂತ್ಯಹಾಡಿದ ಸ್ಮಿತಾ ತೆರೆ ಬರೋದು ಹೇಗೆ ಅಂದ್ರಾ. ತೆರೆಗೆ ಬರ್ತಿರೋದು ಸಿಲ್ಕ್ ಸ್ಮಿತಾ ಅಲ್ಲ. ಅವರ ಕಲರ್ ಫುಲ್ ಕಹಾನಿ.

ತಮಿಳು ಚಿತ್ರ ನಿರ್ದೇಶಕ ಕೆ.ಎಸ್. ಮಣಿಕಂದನ್ ಮತ್ತೊಮ್ಮೆ ಹಾಟ್ ಬೆಡಗಿಯಾಗಿದ್ದ ಸಿಲ್ಕ್ ಕತೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ.

ಅವಳ್ ಅಪ್ಪಾಡಿದಾನ್ ಎಂಬ ಶೀರ್ಷಿಕೆಯಡಿ ಸಿಲ್ಕ್ ಸ್ಮಿತಾ ಜೀವನಚರಿತ್ರೆ ಸಿನಿಮಾ ಸೆಟ್ಟೇರಲು ಸಿದ್ಧವಾಗಿದ್ದು, ಸಿಲ್ಕ್ ಸ್ಮಿತಾ ಪಾತ್ರ ನಿರ್ವಹಿಸಬಲ್ಲ ಮಾದಕ ಚೆಲುವೆಗಾಗಿ ನಿರ್ದೇಶಕರು ಹುಡುಕಾಟ ಆರಂಭಿಸಿದ್ದಾರೆ.

ಈಗಾಗಲೇ ಹಿಂದಿ ಧಾರಾವಾಹಿ ಹಾಗೂ ಚಿತ್ರ ನಿರ್ದೇಶಕಿ ಏಕ್ತಾ ಕಪೂರ್ ಡರ್ಟಿ ಫಿಕ್ಚರ್ ನಿರ್ಮಿಸಿದ್ದು, ಈ ಫಿಲ್ಮ್ ಬಾಕ್ಸಾಫೀಸ್ನಲ್ಲಿ ಗೆದ್ದಿತ್ತು. ಈಗ ಮತ್ತೊಮ್ಮೆ ಸಿಲ್ಕ್ ಕತೆ ತೆರೆಗೆ ಬರಲಿದೆ.

ಐಟಂ ಸಾಂಗ್ ರಾಣಿಯಾಗಿ ಮೆರೆದ ಸಿಲ್ಕ್ ಸ್ಮಿತಾ ವೈಯಕ್ತಿಕ ಬದುಕಿನ ಸಂಘರ್ಷಕ್ಕೆ ಬಲಿಯಾಗಿ ಬದುಕನ್ನು ಕೊನೆಗೊಳಿಸಿಕೊಂಡಿದ್ದರೂ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಈ ಎಮೋಶನ್ ಗಾಗಿಯೇ ಅವರ ಚಿತ್ರ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ ನಿರ್ದೇಶಕ ಮಣಿಕಂದನ್.

1980 ರಲ್ಲಿ ತೆರೆ ಕಂಡ ಶಿವಕುಮಾರ್ ಮತ್ತು ಸರಿತಾ ಅಭಿನಯದ ವಂಡಿಚಕ್ರಂ ತಮಿಳು ಸಿನಿಮಾದಲ್ಲಿ ಬಾರ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಂಡ ಸಿಲ್ಕ್ ಸ್ಮಿತಾ ಒಂದಷ್ಟು ವರ್ಷಗಳ ಕಾಲ ತಮಿಳು,ಕನ್ನಡ ಚಿತ್ರರಂಗದಲ್ಲಿ ರಸಿಕರ ರಾಣಿಯಾಗಿ ಮೆರೆದವರು.

ಮತ್ತೊಮ್ಮೆ ಸಿಲ್ಕ್ ಕತೆ ಸೆಟ್ಟೇರಲಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಯಾರು ಮಿಂಚಬಹುದು ಎಂಬ ಕುತೂಹಲವೂ ಸೃಷ್ಟಿಯಾಗಿದೆ.