ನನ್ನ ಮಗ ಜೈಲಿಗೆ ಹೋಗೋದಾದ್ರೆ ಹೋಗಲಿ, ನಾನೇ ಕಳಸ್ತೀನಿ….!

0

ಕನಕಪುರ: ಬೈ ಎಲೆಕ್ಷನ್ ಬಿಸಿ ನಡುವೆ ಕಾಂಗ್ರೆಸ್ ದಿಗ್ಗಜ ಡಿ.ಕೆ.ಶಿವಕುಮಾರ್‍ಗೆ ಸಿಬಿಐ ಸಖತ್ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆ ಡಿಕೆಶಿಯವರ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟ ಅಧಿಕಾರಿಗಳು ಮನೆ,ಕಚೇರಿ,ಶಿಕ್ಷಣಸಂಸ್ಥೆ ಸೇರಿದಂತೆ ಆಪ್ತರ ಮನೆ, ಕಾರುಗಳಲ್ಲೂ ಶೋಧ ನಡೆಸಿದ್ದಾರೆ. ಈ ಸಿಬಿಐ ರೇಡ್‍ಗೆ ಯಾವುದೇ ಅಳುಕಿಲ್ಲದೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರೋ ಡಿಕೆಶಿಯವರ ತಾಯಿ ಗೌರಮ್ಮ ನನ್ನ ಮಗ ಮತ್ತೊಮ್ಮೆ ಜೈಲಿಗೆ ಹೋಗೋದಾದರೇ ಹೋಗಲಿ. ನಾನೇ ಹೋಗಬಾರಪ್ಪ ಅಂತ ಕಳುಹಿಸಿಕೊಡ್ತಿನಿ ಎನ್ನುವ ಮೂಲಕ ಸಿಬಿಐ ರೇಡ್ ಗೆ ಹೆದರೋದಿಲ್ಲ ಎಂಬ ದಿಟ್ಟತನ ಪ್ರದರ್ಶಿಸಿದ್ದಾರೆ.


ದೊಡ್ಡಾಲದಹಳ್ಳಿಯಲ್ಲಿರೋ ಡಿಕೆಶಿಯವರ ತಾಯಿ ನಿವಾಸದ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಗೌರಮ್ಮ ಅವರಿಂದ ಕೆಲ ವಿಚಾರಗಳ ಕುರಿತು ಮಾಹಿತಿ ಪಡೆದಿದ್ದಾರೆ. ದಾಳಿ ಹಾಗೂ ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೌರಮ್ಮ, ಈಗಾಗಲೇ ನನ್ನ ಮಗ ಒಮ್ಮೆ ಜೈಲಿಗೆ ಹೋಗಿ ಬಂದಿದ್ದಾನೆ. ಸಿಬಿಐಯವರು ಮತ್ತೊಮ್ಮೆ ಜೈಲಿಗೆ ಕರೆದೊಯ್ಯುದಾದರೇ ಕರೆದುಕೊಂಡು ಹೋಗಲಿ. ನನಗೇನು ಬೇಸರವಿಲ್ಲ.ನಾನೇ ಹೋಗಿ ಬಾ ಎಂದು ಕಳುಹಿಸಿಕೊಡುತ್ತೇನೆ. ಸಿಬಿಐ,ಇಡಿಯವರೆಲ್ಲ ನಮಗೆ ಸುಮ್ಮನೇ ತೊಂದರೆ ಕೊಡ್ತಿದ್ದಾರೆ ಎಂಬಂರ್ಥದಲ್ಲಿ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.


ಅಷ್ಟೇ ಅಲ್ಲ, ಸಿಬಿಐ,ಇಡಿ,ಐಟಿಯವರಿಗೆ ನನ್ನ ಮಗನ ಮೇಲೆ ಪ್ರೀತಿ. ಅದಕ್ಕೆ ಅವರು ಮತ್ತೆ-ಮತ್ತೆ ನನ್ನ ಮಗನ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡ್ತಾರೆ. ಅವರು ಏನು ಬೇಕಾದ್ರೂ ಪರಿಶೀಲನೆ ಮಾಡಲಿ, ಏನು ಬೇಕಾದ್ರೂ ತಗೊಂಡು ಹೋಗಲಿ.ಬೇಕಿದ್ದರೇ ನನ್ನ ಮಗನನ್ನು ಬಂಧಿಸಲಿ ಎಂದಿದ್ದಾರೆ.


ಈ ಹಿಂದೆ ಡಿಕೆಶಿ ಜೈಲು ಸೇರಿದ ವೇಳೆ ಗೌರಮ್ಮನವರು ಇದು ತನ್ನ ಮಗನ ವಿರುದ್ಧ ನಡೆದಿರುವ ಪಿತೂರಿ ಎಂದಿದ್ದರಲ್ಲದೇ , ಮಾಜಿಸಿಎಂ ಸಿದ್ಧರಾಮಯ್ಯ ವಿರುದ್ಧವೂ ಆಕ್ರೋಶ ಹೊರಹಾಕಿದ್ದರು. ಆದರೆ ಈ ಬಾರಿ ಗೌರಮ್ಮನವರು ಅತ್ಯಂತ ಧೈರ್ಯದಿಂದ ಇದೆಲ್ಲ ಮಾಮೂಲು ಎಂಬಂತೆ ಪ್ರತಿಕ್ರಿಯಿಸಿದ್ದು, ಅಚ್ಚರಿ ಮೂಡಿಸಿದೆ.


ಇನ್ನು ನಿಮ್ಮ ಮಗನೇ ಯಾಕೆ ಟಾರ್ಗೆಟ್ ಆಗ್ತಾರೆ ಎಂಬ ಮಾಧ್ಯಮದ ಪ್ರಶ್ನೆಗೆ ಟಾರ್ಗೆಟ್ ಅಂದ್ರೇ ಏನಂತ ನನಗೇನು ಗೊತ್ತಿಲ್ಲ. ಆದರೆ ಸಿಬಿಐ, ಇಡಿಯವರಿಗೆಲ್ಲ ನನ್ನ ಮಗನ ಮೇಲೆ ಪ್ರೀತಿ ಜಾಸ್ತಿ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಂದೆಡೆ ಡಿಕೆಶಿ ಮೇಲಿನ ಸಿಬಿಐ ದಾಳಿ ರಾಜಕೀಯ ಅಸ್ತ್ರ. ಉಪಚುನಾವಣೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ರಾಜ್ಯದ ವಿವಿಧೆಡೆ ಡಿಕೆಶಿ ಬೆಂಬಲಿಸಿ ಪ್ರತಿಭಟನೆಗೆ ಮುಂದಾಗಿದೆ.

Leave A Reply

Your email address will not be published.