SP Balasubrahmanyam : ಎಸ್.ಪಿ ಬಾಲಸುಬ್ರಹ್ಮಣ್ಯಂ ಸಂಗೀತ ಲೋಕದ ಮಾಂತ್ರಿಕ ಎಂದು ಹೇಳಿದರೆ ತಪ್ಪಾಗಲಾರದು. ಅನೇಕ ಭಾಷೆಗಳಲ್ಲಿ ಗಾಯನವನ್ನು ಮಾಡಿ ಸೈ ಎನಿಸಿಕೊಂಡಿದ್ದ ಈ ಅದ್ಭುತ ಪ್ರತಿಭೆ ನಮ್ಮನ್ನೆಲ್ಲ ಅಗಲಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದೆ. ಗಾಯನ ಮಾತ್ರವಲ್ಲದೇ ನಟನೆಯಲ್ಲಿಯೂ ಎಸ್ಪಿಬಿ ಸೈ ಎನಿಸಿಕೊಂಡಿದ್ದರು. ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಎಸ್.ಪಿ ಬಾಲಸುಬ್ರಹ್ಮಣ್ಯಂ ಇನ್ನಿತರ ಗಾಯಕರಿಗೂ ಹೀಗೆ ಹೊಸ ಪ್ರಯೋಗಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂದು ಪ್ರೇರಣೆಯನ್ನು ನೀಡುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಎಸ್ಪಿಬಿ ಹೊಸ ಪ್ರಯೋಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಂತಹ ಒಬ್ಬ ಪ್ರತಿಭೆ.
ಎಸ್.ಪಿ ಬಾಲಸುಬ್ರಹ್ಮಣ್ಯಂ ಸಿನಿಮಾಗಳು ನಟಿಸೋದು ಹಾಗಿರಲಿ. ಇವರ ಜೀವನ ಕೂಡ ಸಿನಿಮೀಯ ಸ್ಟೈಲ್ನಲ್ಲಿಯೇ ಇತ್ತು ಎಂದರೆ ತಪ್ಪಾಗಲಾರದು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇದ್ದದ್ದು ಇವರ ಮದುವೆ ಕತೆ. ಸಾವಿತ್ರಿಯನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಪ್ರೀತಿಸಿ ಮದುವೆಯಾಗಿದ್ದರು. ಸಾವಿತ್ರಿ ಹಾಗೂ ಬಾಲಸುಬ್ರಹ್ಮಣ್ಯಂ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಇವರ ಪ್ರೇಮಕ್ಕೆ ಎರಡೂ ಕುಟುಂಬಸ್ಥರಿಂದ ವಿರೋಧವಿತ್ತು.
ಪೋಷಕರ ವಿರೋಧ ಕಟ್ಟಿಕೊಂಡು ಹೇಗೆ ಮದುವೆಯಾಗುವುದು ಎಂಬ ಆತಂಕ ಸಾವಿತ್ರಿ ಹಾಗೂ ಎಸ್ಪಿಬಿ ಇಬ್ಬರಲ್ಲಿಯೂ ಇತ್ತು. ಎಸ್ಪಿಬಿ ಬೆಂಗಳೂರಿನಲ್ಲಿದ್ದರು, ಇದೇ ಸಮಯದಲ್ಲಿ ಸಾವಿತ್ರಿ ಕೂಡ ತಮ್ಮ ಸಹೋದರನ ಜೊತೆಯಲ್ಲಿ ಬೆಂಗಳೂರಿಗೆ ಬಂದು ಅವರ ಮನೆಯಲ್ಲಿಯೇ ನೆಲೆಸಿದ್ದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಎಸ್ಪಿಬಿ ಸಾವಿತ್ರಿಯನ್ನು ಕಿಡ್ನಾಪ್ ಮಾಡಿದ್ದರಂತೆ..!
ಹೌದು..! ಗೆಳೆಯರಾದ ವಿಠ್ಠಲ್ ಹಾಗೂ ಮುರುಳಿ ಸಾವಿತ್ರಿಯನ್ನು ಭೇಟಿಯಾಗಿ ಅವರ ಮನವೊಲಿಸಿ ಅವರನ್ನು ಸಿಂಹಾಚಲಂಗೆ ಕರೆದುಕೊಂಡು ಬಂದಿದ್ದರು. ಇಲ್ಲಿ ಸುಬ್ರಹ್ಮಣ್ಯಂ ಸ್ನೇಹಿತರೇ ಎಲ್ಲಾ ಸೇರಿ ಎಸ್ಪಿಬಿ ಹಾಗೂ ಸಾವಿತ್ರಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಾಕ್ಷಿಯಾಗಿದ್ದರು. ಮಕ್ಕಳು ಈ ರೀತಿ ಓಡಿ ಹೋಗಿ ಮದುವೆಯಾಗಿದ್ದು ಎರಡೂ ಕುಟುಂಬಗಳಿಗೆ ಸರಿ ಎನಿಸಿರಲಿಲ್ಲ. ಹೀಗಾಗಿ ಬರೋಬ್ಬರಿ ಎರಡು ವರ್ಷಗಳ ಕಾಲ ಪೋಷಕರ ದ್ವೇಷವನ್ನು ಎಸ್ಪಿಬಿ ದಂಪತಿ ಎದುರಿಸಿದ್ದರು. ಎಸ್ಪಿಬಿ ದಂಪತಿಗೆ ಮೊದಲ ಮಗುವಿನ ಜನನವಾದ ಬಳಿಕ ಎರಡೂ ಕುಟುಂಬಗಳು ಇವರನ್ನು ಒಪ್ಪಿಕೊಂಡಿದ್ದರು.
SP Balasubrahmanyam married Savitri against the opposition of family members