ಬೆಂಗಳೂರು :TV artist Mandya Ravi: ಕಿರುತೆರೆಯ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿರುವ ನಟ ಮಂಡ್ಯ ರವಿ ಜಾಂಡೀಸ್ನಿಂದ ಮೃತಪಟ್ಟಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿದೆ. ಆದರೆ ಈ ವಿಚಾರವಾಗಿ ಮಂಡ್ಯ ತಂದೆ ಸ್ಪಷ್ಟನೆ ನೀಡಿದ್ದು ನನ್ನ ಪುತ್ರ ಇನ್ನೂ ಬದುಕಿದ್ದಾನೆ. ಆದರೆ ಆತನ ಸ್ಥಿತಿ ಗಂಭೀರವಾಗಿದೆ. ಜಾಂಡೀಸ್ನ ಜೊತೆಯಲ್ಲಿ ಕಿಡ್ನಿ ಸಮಸ್ಯೆ ಕೂಡ ಕಾಣಿಸಿಕೊಂಡಿದೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಂಡ್ಯ ರವಿಯನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ರವಿ ಪ್ರಸಾದ್ ಎಂ, ಕಿರುತೆರೆಯ ಪಾಲಿಗೆ ಮಂಡ್ಯ ರವಿ ಎಂದೇ ಚಿರಪರಿಚಿತರಾಗಿದ್ದಾರೆ. ಮಿಂಚು, ಮುಕ್ತ ಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮೀ ಸ್ಟೋರ್ಸ್, ಮಗಳು ಜಾನಕಿ ಹಾಗೂ ನಮ್ಮನೆ ಯುವರಾಣಿ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ಮಂಡ್ಯ ರವಿ ನಟಿಸಿದ್ದಾರೆ. ಕಾಫಿತೋಟ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿಯೂ ಮಂಡ್ಯ ರವಿ ನಟಿಸಿದ್ದಾರೆ.
ರಂಗಭೂಮಿಯ ಜೊತೆಯಲ್ಲಿ ನಂಟನ್ನು ಹೊಂದಿರುವ ಮಂಡ್ಯ ರವಿ ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸಿದ್ದರು. ಇಂಗ್ಲೀಷ್ ಭಾಷೆಯಲ್ಲಿ ಮಾಸ್ಟರ್ಸ್ ಹಾಗೂ ಎಲ್ಎಲ್ಬಿ ವ್ಯಾಸಂಗ ಮಾಡಿರುವ ರವಿಪ್ರಸಾದ್ ನಟನೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಟಿ.ಎಸ್ ನಾಗಾಭರಣ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಮಹಾಮಾಯಿ ಧಾರವಾಹಿಯಲ್ಲಿ ಪಾತ್ರ ನಿರ್ವಹಿಸುವ ಮೂಲಕ ರವಿ ಕಿರುತೆರೆಗೆ ಕಾಲಿಟ್ಟಿದ್ದಾರೆ.
ರವಿಗೆ ಕಿರುತೆರೆಯಲ್ಲಿ ಸಾಕಷ್ಟು ಹೆಸರು ತಂದುಕೊಟ್ಟ ಧಾರವಾಹಿ ಮಿಂಚು. ಇದಾದ ಬಳಿಕ ಮುಕ್ತ ಮುಕ್ತ ಹಾಗೂ ಕೆಲವೇ ವರ್ಷಗಳ ಹಿಂದೆ ಪ್ರಸಾರ ಕಾಣುತ್ತಿದ್ದ ಟಿ. ಎಸ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಚಂದು ಭಾರ್ಗಿ ಪಾತ್ರ ಕೂಡ ರವಿಗೆ ಅಪಾರ ಅಭಿಮಾನಿಗಳನ್ನು ಹುಟ್ಟು ಹಾಕಿದೆ. ಪ್ರಸ್ತುತ ತೆರೆ ಕಾಣುತ್ತಿರುವ ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ನೆಗಟಿವ್ ಪಾತ್ರದಲ್ಲಿ ನಟಿಸುತ್ತಿದ್ದ ರವಿ ಸದ್ಯ ಈ ಶೂಟಿಂಗ್ನಲ್ಲಿ ಭಾಗಿಯಾಗಿಲ್ಲ. ಮಂಡ್ಯ ರವಿ ಸಾವು ವದಂತಿ ಸುಳ್ಳಾಗಲಿ. ಅವರು ಮತ್ತೊಮ್ಮೆ ಆರೋಗ್ಯವಾಗಿ ಧಾರವಾಹಿಗಳಲ್ಲಿ ನಟಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದನ್ನೂ ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?
TV artist Mandya Ravi’s father clarifies about death rumours