ನಿಯಮ ಉಲ್ಲಂಘಿಸುವ ಪ್ರಿಂಟಿಂಗ್ ಪ್ರೆಸ್ ಗಳ ವಿರುದ್ದ ಕಠಿಣ ಕ್ರಮ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ : (Action against printing presses) ವಿಧಾನಸಭಾ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಸೂಚಿಸಿರುವ ನಿಬಂಧನೆಗಳನ್ನು ಉಲ್ಲಂಘಿಸಿ ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮುಗಲಭೆ ಸೃಷ್ಟಿಸುವಂತಹ ಕರಪತ್ರ, ಪೋಸ್ಟರ್ ಮತ್ತು ಬ್ಯಾನರಗಳನ್ನು ಮುದ್ರಿಸಿದಲ್ಲಿ ಅಂತಹ ಮುದ್ರಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.

ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು , ಪ್ಲೆಕ್ಸ್ ಮುದ್ರಕರು ಮತ್ತು ಅವರ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಪತ್ರ, ಫಲಕ ಪೋಸ್ಟರ್ ಬ್ಯಾನರ್ ಮುಂಭಾಗದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಮುದ್ರಣ ಪ್ರತಿಗಳ ಸಂಖ್ಯೆ ನಮೂದಿಸಬೇಕು. ಯಾವುದೇ ಧರ್ಮ, ಜಾತಿ, ಭಾಷೆ, ಜನರ ಭಾವನೆಗೆ ಧಕ್ಕೆಯಾಗುವಂತಹ ವಿಷಯಗಳನ್ನು ಮುದ್ರಿಸಬಾರದು ಎಂದು ತಿಳಿಸಿದರು.

ಮುದ್ರಕರು ಪಾಂಪ್ಲೇಟಗಳು ಮತ್ತು ಪೋಸ್ಟರಗಳನ್ನು ಮುದ್ರಿಸುವ ಮೊದಲು ಪ್ರಕಾಶಕರ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ದೃಢೀಕರಣ ಪಡೆದಿರಲೇಬೇಕು. ಗುರುತಿನ ದೃಢೀಕರಣವಿಲ್ಲದೇ ಮುದ್ರಣ ಮಾಡಬಾರದು. ತಾವು ಮುದ್ರಿಸುವ ಒಂದು ಪ್ರತಿಯನ್ನು, ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ (ಆರ್‌ಓ) ಗಳಿಗೆ ಸಲ್ಲಿಸಬೇಕು. ಯಾವುದೇ ಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಹಾಕಬಾರದು ಎಂದು ಸೂಚಿಸಿದರು. ಮುದ್ರಣ ಕುರಿತ ಸೂಕ್ತ ಬಿಲ್ ಗಳನ್ನು ಇಟ್ಟುಕೊಂಡಿರಬೇಕು, ಮುದ್ರಣ ವೆಚ್ಚವನ್ನು ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಖರ್ಚು ವೆಚ್ಚಗಳಿಗೆ ಸೇರ್ಪಡೆ ಮಾಡುವುದರಿಂದ, ಅಗತ್ಯವಿದ್ದಲ್ಲಿ ಅವುಗಳನ್ನು ಹಾಜರುಪಡಿಸಬೇಕು ಎಂದರು.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಕನಸು ನನಸು: 60 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಸಿ ಕೊಟ್ಟ ಬಿಜೆಪಿ

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ತರಬೇತಿ ನಿರತ ಪ್ರೊಬೇಷನರಿ ಐ.ಎ.ಎಸ್.ಅಧಿಕಾರಿ ಯತೀಶ್, ಉಪಸ್ಥಿತರಿದ್ದರು. ಮಾಸ್ಟರ್ ಟ್ರೈನರ್ ಡಾ.ಅಶೋಕ್ ಕಾಮತ್ ಅವರು ಮುದ್ರಣ ಮತ್ತು ಪ್ರಿಂಟಿಂಗ್ ಚುನಾವಣಾ ಆಯೋಗವು ಸೂಚಿಸಿರುವ ಮಾನದಂಡಗಳ ಕುರಿತಂತೆ ಮಾಹಿತಿ ನೀಡಿದರು. ಇನ್ನೂ ಜಿಲ್ಲೆಯ ವಿವಿಧ ಪ್ರಿಂಟಿಂಗ್ ಪ್ರೆಸ್ ಗಳ ಮಾಲೀಕರು , ಪ್ಲೆಕ್ಸ್ ಮುದ್ರಕರು ಮತ್ತು ಅವರ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Action against printing presses: Strict action against printing presses violating rules: District Collector Kurmarao M

Comments are closed.