Brahmavara: (ಬ್ರಹ್ಮಾವರ ) ನದಿಗೆ ಮೀನು ಹಿಡಿಯಲು ತೆರಳಿದ್ದ ವೇಳೆಯಲ್ಲಿ ಕಾಲು ಜಾರಿ ನದಿಯಲ್ಲಿ ಮುಳುಗಿ ಯುವಕರಿಬ್ಬರು ಸಾವವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಕೂರಿನ ಹೊಸಾಳ ಎಂಬಲ್ಲಿ ನಡೆದಿದೆ. ಇಬ್ಬರು ಯುವಕರ ಮೃತದೇಹವನ್ನು ಮುಳುಗು ತಜ್ಞರು ಹೊರ ತೆಗೆದಿದ್ದಾರೆ.
ಬ್ರಹ್ಮಾವರ ತಾಲೂಕಿನ ಬಾರಕೂರಿನ ಹೊಸಾಳದ ನಿವಾಸಿಗಳಾಗಿರುವ ಶ್ರೀಶ ಹಾಗೂ ಪ್ರಶಾಂತ್ ಎಂಬವರೇ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಮೃತ ದುರ್ದೈವಿಗಳು. ಶ್ರೀಶ ಹಾಗೂ ಪ್ರಶಾಂತ್ ಕೆಲಸದ ಬಿಡುವಿನ ವೇಳೆಯಲ್ಲಿ ನದಿಯಲ್ಲಿ ಬಲೆ ಬಿಟ್ಟು ಮೀನನ್ನು ಹಿಡಿಯುತ್ತಿದ್ದರು. ಇಂದು ಮುಂಜಾನೆ ತಿಂಡಿ ತಿಂದು ಇಬ್ಬರು ನದಿಗೆ ಬಂದಿದ್ದಾರೆ. ಬಲೆ ಬಿಟ್ಟು ಮೀನು ಹಿಡಿಯುವ ಕಾರ್ಯವನ್ನು ಮಾಡುತ್ತಿದ್ದರು.

ಆದರೆ ನದಿಯಲ್ಲಿನ ಉಬ್ಬರ ಇಬ್ಬರ ಗಮನಕ್ಕೆ ಬಾರದಾಗಿತ್ತು. ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದಂತೆಯೇ ಶ್ರೀಶ ಕಾಲು ಜಾರಿ ನದಿಯಲ್ಲಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಪ್ರಶಾಂತ್ ಶ್ರೀಶನ ರಕ್ಷಣೆಗೆ ಮುಂದಾಗಿದ್ದಾನೆ. ಆದರೆ ನದಿಯಲ್ಲಿ ನೀರಿನ ಮಟ್ಟ ವಿಪರೀತ ಏರಿಕೆಯಾದ ಹಿನ್ನೆಲೆಯಲ್ಲಿ ಇಬ್ಬರೂ ಕೂಡ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ಪಾರಿವಾಳಕ್ಕೆ ಕಾಳು ಹಾಕೋಕೇ ಮುನ್ನ ಎಚ್ಚರ: ನಿಮಗೆ ಬೀಳುತ್ತೆ ಭಾರಿ ದಂಡ
ಮುಳುಗುತಜ್ಞ ಈಶ್ವರ ಮಲ್ಪೆ ಹಾಗೂ ಇತರ ಈಜುಗಾರರ ತಂಡ ಸ್ಥಳಕ್ಕೆ ಬಂದು ಶವಗಳ ಶೋಧ ಕಾರ್ಯವನ್ನು ಆರಂಭಿಸಿತ್ತು. ಅಂತಿಮವಾಗಿ ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಈ ಕುರಿತು ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಇಬ್ಬರು ಯುವಕರು ತಮಗೆ ಕೆಲಸದಲ್ಲಿ ಬಿಡುವು ಇದ್ದಾಗಲೆಲ್ಲಾ ಹೊಳೆಗೆ ತೆರಳಿ ಮೀನುಗಾರಿಕೆ ನಡೆಸುತ್ತಿದ್ದರು. ಆದರೆ ಇಂದು ವಿಧಿ ಮಾತ್ರ ಇವರ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ.

ಇದನ್ನೂ ಓದಿ : Sonu Gowda : ಯಾರೀ ಸೋನು ಗೌಡ ? ಟಿಕ್ ಟಾಕ್ ಸ್ಟಾರ್ ಸೋನುಶ್ರೀನಿವಾಸ್ ಗೌಡ ಅಸಲಿಯತ್ತೇನು ! ಇಲ್ಲಿದೆ Exclusive ಸ್ಟೋರಿ
ಅಂದರ್ ಬಾಹರ್ ಆಡುತ್ತಿದ್ದ ಆರು ಮಂದಿ ಅರೆಸ್ಟ್
ಹಾಡಿಯೊಂದರಲ್ಲಿ ಕದ್ದುಮುಚ್ಚಿ ಅಂದರ್ ಬಾಹರ್ ಆಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸ್ಕತ್ತೂರು ಬಳಿಯಲ್ಲಿ ನಡೆದಿದೆ. ಹೆಸ್ಕತ್ತೂರು ಶಾಲೆಯ ಬಳಿಯಲ್ಲಿರುವ ಹಾಡಿಯಲ್ಲಿ ಇಸ್ಪೀಟ್ ಆಡುತ್ತಿದ್ದ ಶೇಷಾದ್ರಿ, ಸಂತೋಷ್, ಹನುಮಂತ, ಸುಧಾಕರ, ರವಿ ಹಾಗೂ ವಿಜಯ್ ಕುಮಾರ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಐದು ದ್ವಿಚಕ್ರ ವಾಹನ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ :ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ ಹಣ ಪಡೆಯಲು ಸರಕಾರದಿಂದ ಹೊಸ ರೂಲ್ಸ್
Brahmavara: Two young men drowned in the river while fishing Hosala Near Barkur Udupi district