ಬೈಂದೂರಿನಲ್ಲಿ ಗೋಪಾಲ ಪೂಜಾರಿ ಮಿನಿಸ್ಟರ್‌ ಆಗಿ ಆಯ್ತು!

ಬೈಂದೂರು : (Byndoor election result 2023) ಕರ್ನಾಟಕದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್‌ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕರಾವಳಿಯಲ್ಲಿ ಬಿಜೆಪಿಯಲ್ಲಿ ಎಲ್ಲ ಐದು ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ ಜಯ ಗಳಿಸಿ ಪ್ರಭುತ್ವ ಸಾಧಿಸಿದೆ. ಹಿಂದೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡು, ಬಿಜೆಪಿಯ ಪ್ರಭುತ್ವದ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿರದ ಗೋಪಾಲ ಪೂಜಾರಿ ಅವರು ಒಬ್ಬ ಸಜ್ಜನ ರಾಜಕಾರಣಿ. ಹೊಟೇಲ್‌ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ಸು ಕಂಡವರು. ಆದರೆ ಇತ್ತೀಚಿಗೆ ವ್ಯಾವಹಾರಿಕವಾಗಿ ಬಹಳ ನಷ್ಟದಲ್ಲಿದ್ದಾರೆ ಎಂಬ ಕಾರಣಕ್ಕಾಗಿ ಅವರ ಬಗ್ಗೆ ಬಹಳ ಅನುಕಂಪ ಮೂಡಿ ಬಂದಿತ್ತು. ಅವರ ಸುತ್ತುವರಿದ ಅಭಿಮಾನಿಗಳು ಇದನ್ನೇ ಬಂಡವಾಳವಾಗಿಸಿಕೊಂಡು ಪ್ರಚಾರ ಮಾಡಿದರು. ಈ ಬಾರಿ ಬೈಂದೂರಿಗೆ ದೊರೆ ಗೋಪಾಲ ಪೂಜಾರಿ ಎಂದು ಬಿಂಬಿಸಲಾಗಿತ್ತು. ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಅವರು ಲೆಕ್ಕಕ್ಕೇ ಇಲ್ಲವೆಂಬಂತೆ ಕಾಂಗ್ರೆಸ್‌ ಪ್ರಚಾರ ಮಾಡಿತ್ತು. ಅವರ ಸರಳತನವನ್ನೇ ವೀಕ್ನೆಸ್‌ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗಿತ್ತು.

ಗೋಪಾಲ ಪೂಜಾರಿಯವರಲ್ಲಿ ಹಣವಿಲ್ಲ, ಬಹಳ ಸೋತಿದ್ದಾರೆ, ಇದೊಂದು ಬಾರಿ ಗೆಲ್ಲಿಸಿ ಎಂಬ ಮಾತುಗಳೇ ಕೇಳಿ ಬಂದಿತ್ತು. ಆದರೆ ಗುರುರಾಜ್‌ ಗಂಟಿಹೊಳೆ ಅವರು ಆಗಲೇ ಬೈಂದೂರಿನ ಯುವಕರ ಹೃದಯ ಗೆದ್ದಿದ್ದರು. ಪಕ್ಷದ ಸಿದ್ಧಾಂತ ಹಾಗೂ ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನೇ ನಂಬಿಕೊಂಡಿರುವ ಗಂಟಿಹೊಳೆ ಅವರ ಮೇಲಿನ ಅಭಿಮಾನಿ ಬೈಂದೂರಿನಲ್ಲಿ ಗುಪ್ತಗಾಮಿನಿಯಾಗಿ ಹರಿದಿತ್ತು. ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯಲ್ಲಿ ಸಕ್ರಿಯರಾಗಿರುವ ಗಂಟಿಹೊಳೆ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆದ್ದರಿಂದ ಅವರ ಜಯಕ್ಕಾಗಿ ಬಿಜೆಪಿ ಕಠಿಣ ಶ್ರಮ ವಹಿಸಿತ್ತು. ಕೊನೆಯ ಕ್ಷಣದವರೆಗೂ ಹೋರಾಟ ನೀಡಿದ ಗಂಟಿಹೊಳೆ 16,153 ಮತಗಳ ಅಂತರದಲ್ಲಿ ಜಯ ಗಳಿಸಿದರು.

ಮಾಜಿ ಶಾಸಕರ ಪ್ರೋತ್ಸಾಹ !

ಮಾಜಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್‌ ನೀಡದ ಕಾರಣ ಈ ಬಾರಿ ತಟಸ್ಥರಾಗಿದ್ದರು. ಆದರೆ ಬಿಜೆಪಿ ಮೇಲಿನ ಮುನಿಸು ಪೂಜಾರಿಯವರಿಗೆ ಬೆಂಬಲ ನೀಡುವಂತೆ ಮಾಡಿತು. ತನ್ನದೇ ಕ್ಷೇತ್ರದ ಗುರುರಾಜ್‌ ಯಾರೆಂಬುದೇ ಗೊತ್ತಿಲ್ಲ ಎಂದು ಸುಕುಮಾರ ಶೆಟ್ಟಿ ಅವರು ನೀಡಿರುವ ಹೇಳಿಕೆ, ಶೆಟ್ಟರ ಮುಂದಿನ ನಡೆಯನ್ನು ಸ್ಪಷ್ಟಪಡಿಸಿತ್ತು. ಪೂಜಾರಿಯವರಿಗೆ ಸುಕುಮಾರ ಶೆಟ್ಟಿ ಬೆಂಬಲ ನೀಡಿದ್ದು ಗೋಪಾಲ ಪೂಜಾರಿ ಅವರ ಅಭಿಮಾನಿಗಳಲ್ಲಿ ಬೈಂದೂರಿನಲ್ಲಿ ಕಾಂಗ್ರೆಸ್‌ ಗೆಲ್ಲುವುದನ್ನು ಖಚಿತಪಡಿಸಿತ್ತು.
ಗೋಪಾಲ ಪೂಜಾರಿಯವರು ಪ್ರಬಲವಾಗಿ ನಂಬಿದ್ದ “ಅನುಕಂಪ”, “ಆರ್ಥಿಕವಾಗಿ ಸೋತವರು”, “ಕೊನೆಯ ಚುನಾವಣೆ”, “ಶ್ರೀನಿವಾಸ ಪೂಜಾರಿಯವರ ಭಯೋತ್ಪಾಕರ ಹೇಳಿಕೆ” ಇವುಗಳು ಫಲಿತಾಂಶದಲ್ಲಿ ಪ್ರಮುಖ ಪಾತ್ರವಹಿಸಬಹುದು ಎಂದು ನಂಬಿದ್ದರು. ಆದರೆ ಇದನ್ನು ಮಾರುಕಟ್ಟೆ ಮಾಡುವಲ್ಲಿ ಯಶಸ್ಸು ಸಿಗಲಿಲ್ಲ.

ತಸುಕುಮಾರ ಶೆಟ್ಟಿಗೆ ಎಂಎಲ್‌ಸಿ ಪಟ್ಟ!!!

ಆಧುನಿಕ ಸೋಷಿಯಲ್‌ ಮೀಡಿಯಾ, ಮಾಧ್ಯಮ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಗೋಪಾಲ ಪೂಜಾರಿಯವರ ತಂಡ ವಿಫಲವಾಗಿತ್ತು. ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ “ಸುಕುಮಾರ ಶೆಟ್ಟಿ ಅವರು ಗೋಪಾಲ ಪೂಜಾರಿ ಅವರಿಗೆ ಬೆಂಬಲ ನೀಡುತ್ತಾರೆ, ಕಾಂಗ್ರೆಸ್‌ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದರೆ ಗೋಪಾಲ ಪೂಜಾರಿ ಅವರು ಸಚಿವರಾಗುತ್ತಾರೆ, “ಸುಕುಮಾರ ಶೆಟ್ಟಿಯವರು ಎಂಎಲ್‌ಸಿ ಆಗುತ್ತಾರೆ.” ಎಂಬ ಸುದ್ದಿ ಬೈಂದೂರನ್ನೇ ಆವರಿಸಿತ್ತು. ಯಾವ ಕಾರಣಕ್ಕಾಗಿ ಬಿಜೆಪಿಯನ್ನು ತೊರೆದು ಗೋಪಾಲ ಪೂಜಾರಿಯವರನ್ನು ಬೆಂಬಲಿಸುತ್ತಿದ್ದಾರೋ ಆ ಯುವಕರಲ್ಲಿ ನಿರಾಸೆಯನ್ನುಂಟು ಮಾಡಿತು. ಪರಿಣಾಮ ಅಭ್ಯರ್ಥಿಯಾಗಿ ಗೋಪಾಲ ಪೂಜಾರಿಯವರ ಕೊನೆಯ ಚುನಾವಣೆಯಲ್ಲಿ ಸೋಲಿನ ಆಘಾತವಾಯಿತು. ಕೆಲವೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಎಷ್ಟೇ ಸಮರ್ಥರಾಗಿದ್ದರೂ ಅವರಿಗೆ ಸಲಹೆ ನೀಡುವ, ಅವರನ್ನು ಸುತ್ತುವರಿದಿರುವವರ ಯೋಜನೆ, ಯೋಚನೆಗಳಿಂದಲೂ ಸೋಲು ಸಂಭವಿಸುವುದಿದೆ.

ಇದನ್ನೂ ಓದಿ : Karnataka Election Result 2023 : ಉಡುಪಿ ಜಿಲ್ಲೆಯಲ್ಲಿ ಖಾತೆ ತೆರೆಯದ ಕಾಂಗ್ರೆಸ್, ಐದು ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ

ಇದನ್ನೂ ಓದಿ : Karnataka Election Result 2023 : 95 ಬಿಜೆಪಿ ಶಾಸಕರ ಪೈಕಿ 61 ಶಾಸಕರಿಗೆ ಸೋಲು

Comments are closed.